ನವದೆಹಲಿ : ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳಕ್ಕೆ ಬೇಸತ್ತು, 4 ವರ್ಷದ ಪುಟ್ಟ ಮಗನಿಗೆ ಗಿಫ್ಟ್ ಇಟ್ಟು, 20 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರಿನ ಟೆಕ್ಕಿ ಉತ್ತರ ಭಾರತ ಮೂಲದ ಅತುಲ್ ಸುಭಾಷ್ ಸಾವು ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳನ್ನು ಮಹಿಳೆಯರೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಬದಲಾವಣೆ ಆಗಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ನಡುವೆ ಸುಪ್ರೀಂ ಕೋರ್ಟ್, ವಿಚ್ಛೇದನದ ಕೇಸ್‌ಗಳಲ್ಲಿ ಜೀವನಾಂಶ ಮೊತ್ತವನ್ನು ನಿರ್ಧಾರ ಮಾಡುವಾಗ ಎಂಟು ಅಂಶಗಳನ್ನು ಪರಿಗಣನೆ ಮಾಡಬೇಕು ಎಂದು ಸಲಹೆ ನೀಡಿದೆ. ವಿಚ್ಛೇದನ ಪ್ರಕರಣಗಳಲ್ಲಿ ಶಾಶ್ವತ ಜೀವನಾಂಶದ ಮೊತ್ತವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಎಂಟು ಪ್ರಮುಖ ಮಾನದಂಡಗಳನ್ನು ಹಾಕಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಅವರ ಸಾವಿನಿಂದ ನಡೆಯುತ್ತಿರುವ ಚರ್ಚೆಗಳ ಮಧ್ಯೆ ಈ ನಿರ್ದೇಶನ ಬಂದಿದೆ.
ಪ್ರವೀಣ್ ಕುಮಾರ್ ಜೈನ್ ಮತ್ತು ಅಂಜು ಜೈನ್ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರನ್ನೊಳಗೊಂಡ ಎಸ್‌ಸಿ ಪೀಠವು ಪ್ರವೀಣ್ ಕುಮಾರ್ ಜೈನ್ ಅವರ ಪತ್ನಿಗೆ 5 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿದೆ. ಮಂಗಳವಾರದ ತೀರ್ಪಿನಲ್ಲಿ ಜೀವನಾಂಶವನ್ನು ನಿರ್ಣಯಿಸಲು ನ್ಯಾಯಾಲಯವು ಎಂಟು ಅಂಶಗಳ ಮಾರ್ಗಸೂಚಿಯನ್ನು ವಿವರಿಸಿದೆ.
ಈ ಪ್ರಕರಣದಲ್ಲಿ, ಹಿಂದೂ ವಿವಾಹ ಕಾಯಿದೆಯ ವ್ಯಾಪ್ತಿಯ ಅಡಿಯಲ್ಲಿ ಮದುವೆಯು “ಸರಿ ಮಾಡಲಾಗದಂತೆ ಮುರಿದುಹೋಗಿದೆ” ಎಂದು ನ್ಯಾಯಾಲಯವು ಗಮನಿಸಿದೆ. ಪತ್ನಿಗೆ ಶಾಶ್ವತ ಜೀವನಾಂಶವನ್ನು ನಿರ್ಧರಿಸುವುದು ಪರಿಹಾರದ ಅಗತ್ಯವಿರುವ ಏಕೈಕ ಸಮಸ್ಯೆಯಾಗಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಸೂಚಿಸಿರುವ 8 ಅಂಶಗಳು
1. ಎರಡೂ ಕಡೆಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
2. ಹೆಂಡತಿ ಮತ್ತು ಅವಲಂಬಿತ ಮಕ್ಕಳ ಮೂಲಭೂತವಾದ ಅಗತ್ಯತೆಗಳು
3. ಎರಡೂ ಪಕ್ಷಗಳ ಅರ್ಹತೆಗಳು ಮತ್ತು ಉದ್ಯೋಗದ ಸ್ಥಿತಿ
4. ಅರ್ಜಿದಾರರ ಸ್ವತಂತ್ರ ಆದಾಯ ಅಥವಾ ಸ್ವತ್ತುಗಳು
5. ವಿವಾಹವಾಗಿರುವ ಮನೆಯಲ್ಲಿ ಹೆಂಡತಿ ಅನುಭವಿಸುತ್ತಿದ್ದ ಜೀವನ ಮಟ್ಟ
6. ಕುಟುಂಬದ ಜವಾಬ್ದಾರಿಗಳಿಗಾಗಿ ಸಂಗಾತಿಯಿಂದ ಮಾಡಿದ ವೃತ್ತಿ ತ್ಯಾಗ
7. ಹಾಗೇನಾದರೂ ಪತ್ನಿ ಯಾವುದೇ ಕೆಲಸದಲ್ಲಿ ಇಲ್ಲದೇ ಇದ್ದರೆ ಆಕೆಗೆ ಆಗುವ ಕೋರ್ಟ್‌ನ ವೆಚ್ಚಗಳು
8. ಗಂಡನ ಆರ್ಥಿಕ ಸಾಮರ್ಥ್ಯ, ಆದಾಯ ಮತ್ತು ಅಸ್ತಿತ್ವದಲ್ಲಿರುವ ಸಾಲಗಳು
ಇದೆಲ್ಲದರೊಂದಿಗೆ ಈ ಎಂಟು ಅಂಶಗಳು ಕಠಿಣ ನಿಯಮಗಳಲ್ಲ ಆದರೆ ಜೀವನಾಂಶವನ್ನು ನಿರ್ಧರಿಸಲು ಮಾರ್ಗಸೂಚಿಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.


