ನಮ್ಮ ಮನೆ ಯಾವುದು ಎಂದು ಕೇಳಿದರೆ, ಎಲ್ಲರೂ ತಂತಮ್ಮ ಮನೆಯ ವಿಳಾಸ ಹೇಳಿ, ʻಇದು ನನ್ನ ಮನೆʼ ಎಂದು ಹೇಳಬಹುದು. ಆದರೆ ನಮಗೆಲ್ಲ ಇರುವ ಮನೆಯೊಂದೇ- ಅದು ಭೂಮಿ. ಹುಟ್ಟಿದ ಘಳಿಗೆಯಿಂದ ಇರುವ ಕಡೆಯ ಕ್ಷಣದವರೆಗೆ ʻನಮನ್ನೆಲ್ಲʼ ಸಲಹುವಂಥ ನಿತ್ಯನೂತನ ಮನೆಯೀ ವಸುಂಧರೆ. ʻನಮ್ಮನ್ನುʼ ಎಂದರೆ ಮನುಷ್ಯರನ್ನು ಎಂದಷ್ಟೇ ಅರ್ಥ ಮಾಡಿಕೊಂಡಿದ್ದರಿಂದ ಈ ಪರಿಯಲ್ಲಿ ಸಮಸ್ಯೆ ಎದುರಾಗಿದೆ ಇಂದು. ಸಕಲ ಜೀವಜಂತುಗಳಿಗೆ ಇರುವುದೊಂದೇ ಮನೆ. ಆದರೆ ಮನುಷ್ಯರ ಹೊರತಾಗಿ ಇನ್ನಾವ ಜೀವಿಗಳೂ ತಮ್ಮ ಮನೆಯನ್ನು ಕೊಳೆ ಮಾಡಿದವರಲ್ಲ. ಇದನ್ನು ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಗಿಡವೊಂದನ್ನು ನೆಟ್ಟು, ʻಹೇಗಿದ್ದರೂ ಮಳೆಗಾಲ ಶುರುವಾಗುತ್ತಿದೆ; ನೀರು ಹಾಕುವುದೂ ಬೇಕಿಲ್ಲʼ ಎಂಬ ಉದಾಸೀನತೆಯಲ್ಲಿ ಸುಮ್ಮನಿದ್ದರೆ ಸಾಕು ಎಂದರ್ಥವಲ್ಲ. ವಿಶ್ವದ ಜೈವಿಕ ವೈಧ್ಯತೆಯನ್ನು ಉಳಿಸಬೇಕೆನ್ನುವ, ಕಾಡು ಕಡಿಮೆಯಾಗುತ್ತಿರುವ ಮತ್ತು ಉಳಿದಿರುವ ಕಾಡಿನಲ್ಲೂ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ತುರ್ತು. ಜೊತೆಗೆ, ಭೂಮಿ ಬಿಸಿಯಾಗುತ್ತಿರುವುದರಿಂದ ಹವಾಮಾನದಲ್ಲಿ ಆಗುವ ಘೋರ ವೈಪರಿತ್ಯಗಳನ್ನು ಅರ್ಥ ಮಾಡಿಕೊಂಡು, ಜಾಗತಿಕ ತಾಪಮಾನ ಏರದಂತೆ ತಡೆಯುವ ಕ್ರಮಗಳನ್ನು ಮನಸ್ಪೂರ್ತಿಯಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಈ ಹಿನ್ನೆಲೆಯಲ್ಲಿ ಈ ಅರಿವಿನ ದಿನದ ಬಗ್ಗೆ ಇನ್ನಷ್ಟು ಮಾಹಿತಿಗಳಿವು.
ವಿಶ್ವ ಪರಿಸರ ದಿನದ ಇತಿಹಾಸ
1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಆದ್ದರಿಂದ ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ದಿನದ ಗುರಿಯೇನೆಂದರೆ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಯನ್ನು ಉತ್ತೇಜಿಸುವುದಾಗಿದೆ.
ವಿಶ್ವ ಪರಿಸರ ದಿನದ ಮಹತ್ವ ಹಾಗೂ ಆಚರಣೆ ಹೇಗೆ?
ವಿಶ್ವ ಪರಿಸರ ದಿನವನ್ನು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಪರಿಸರ ಉಳಿಸಲು ಎಲ್ಲರೂ ಒಗ್ಗೂಡುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ದಿನದಂದು ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳು ಹಾಗೂ ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡುತ್ತಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com