ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಭಾರೀ ಆಘಾತ ಎದುರಾಗಿದೆ. ತಮ್ಮ ವಿರುದ್ಧವೇ ಬಂಡೆದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಉಚ್ಚಾಟನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ರು. ಈ ಬೆನ್ನಲ್ಲೇ ಬಿ.ವೈ. ವಿಜಯೇಂದ್ರಗೂ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಇನ್ನೊಂದು ವಾರ ಮಾತ್ರ ರಾಜ್ಯಾಧ್ಯಕ್ಷರಾಗಿ ಇರಲಿದ್ದು, ಜನಾಕ್ರೋಶ ಯಾತ್ರೆ ಮಧ್ಯದಲ್ಲೇ ಶಾಕಿಂಗ್ ನ್ಯೂಸ್ ನೀಡಿದೆ. ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಏಪ್ರಿಲ್ ಕೊನೆ ವಾರದಲ್ಲಿ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಡೆಯಲಿದೆ. ಇದಕ್ಕೂ ಮೊದಲು ಈ ಐದೂ ರಾಜ್ಯಗಳಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಕರ್ನಾಟಕ ವಿಚಾರವಾಗಿ ಯಾವುದೇ ಕ್ಷಣದಲ್ಲಾದರೂ ಅಧ್ಯಕ್ಷರ ಘೋಷಣೆ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಬಿ.ಎಸ್. ಯಡಿಯೂರಪ್ಪ ಮಗ ರಾಘವೇಂದ್ರ, ಸಂಸದರಾಗಿ ರಾಷ್ಟ್ರ ಹಾಗೂ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ನೆಲೆಯೂರಿದ್ದಾರೆ. ಹೀಗಾಗಿ ತಮ್ಮ ಎರಡನೇ ಮಗ ಬಿ.ವೈ. ವಿಜಯೇಂದ್ರರನ್ನ, ರಾಜ್ಯ ರಾಜಕಾರಣದಲ್ಲಿ ನೆಲೆ ನಿಲ್ಲಿಸಬೇಕೆಂದು ಶತಾಯಗತಾಯ ಪ್ರಯತ್ನ ನಡೆಸಿದ್ರು. 2021ರಲ್ಲಿ ಸಿಎಂ ಸ್ಥಾನವನ್ನು ಬಸವರಾಜ ಬೊಮ್ಮಾಯಿಗೆ ಬಿಟ್ಟುಕೊಡುವಾಗ, ತಮ್ಮ ಮಗನಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಹೈಕಮಾಂಡ್ನಿಂದ ಪಡೆದಿದ್ರು. ಜೊತೆಗೆ 2023ರಲ್ಲಿ ಮೊದಲ ಬಾರಿಗೆ ಶಿಕಾರಿಪುರದಿಂದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರರನ್ನು ನಿಲ್ಲಿಸಿ, ಗೆಲ್ಲಿಸಿಕೊಳ್ಳುವಲ್ಲಿ ಬಿಎಸ್ವೈ ಯಶಸ್ವಿಯಾದ್ರು. ಇನ್ನು, ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ, ಮುಂದಿನ ಸಾರಥಿಯ ಆಯ್ಕೆಗಾಗಿ, ಹೈಕಮಾಂಡ್ ನಾಯಕರು ಹುಡುಕಾಟದಲ್ಲಿದ್ರು. ಸಮರ್ಥ ನಾಯಕತ್ವವನ್ನು ಹಿರಿಯ, ಅನುಭವಿ, ಸಮರ್ಥರಿಗೆ ನೀಡಬೇಕೆಂದು ಅಂದುಕೊಂಡಿದ್ರು. ಆ ವೇಳೆ ಆರ್. ಅಶೋಕ್ ಕೂಡ ಅಧ್ಯಕ್ಷರಾಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದೂ ಉಂಟು. ಇದೇ ಅವಕಾಶವನ್ನು ಬಳಸಿಕೊಂಡ ಬಿಎಸ್ವೈ, ಪಕ್ಷದಲ್ಲಿ ಹಿರಿಯರು, ಅನುಭವಿಗಳಿದ್ರೂ, ತಮ್ಮ ಮಗ ವಿಜಯೇಂದ್ರನನ್ನೇ ರಾಜ್ಯಾಧ್ಯಕ್ಷನನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ರು. ಹೈಕಮಾಂಡ್ ಎಷ್ಟೇ ಹೇಳಿದ್ರೂ ಕೇಳಲೇ ಇಲ್ಲ. ಪಕ್ಷದಲ್ಲಿ ಒಡಕು ಉಂಟಾಗಬಹುದೆಂದು ಎಚ್ಚರಿಕೆ ಕೊಟ್ಟರೂ ಬಗ್ಗಲೇ ಇಲ್ಲ. ಅಂತೂ ಇಂತೂ ತಮ್ಮ ಮಗನನ್ನೇ ಅಧ್ಯಕ್ಷನನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ರು.
ಅಂದಿನಿಂದ ಇಂದಿನವರೆಗೂ ಬಿಜೆಪಿ ಪಾಳಯದಲ್ಲಿ ಪರೋಕ್ಷವಾಗಿ ಅಸಮಾಧಾನಗಳ ಬುಗ್ಗೆ ಎದ್ದೇಳುತ್ತಲೇ ಇದೆ. ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಎದುರುಹಾಕಿಕೊಂಡ ಪರಿಣಾಮ, ಅನುಭವಿಗಳು ಪಕ್ಷದಿಂದ ಹೊರ ನಡೆಯಬೇಕಾಯ್ತು. ಆಗ ಕೆ.ಎಸ್. ಈಶ್ವರಪ್ಪ, ಈಗ ಯತ್ನಾಳ್ ಅನ್ನೋದು ದುರ್ದೈವ. ಆರ್. ಅಶೋಕ್ ಬಹಿರಂಗವಾಗಿ ಏನನ್ನೂ ಹೇಳದಿದ್ರೂ, ಪರೋಕ್ಷವಾಗಿ ತಮ್ಮ ನಡವಳಿಕೆಗಳ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಹಲವು ಬಾರಿ ಬಿ.ವೈ. ವಿಜಯೇಂದ್ರ ಕರೆದ ಸಭೆಗೂ ಗೈರಾಗಿದ್ರು. ಸಚಿವ ಸಂಪುಟದಿಂದ ಬಿಜೆಪಿ ಶಾಸಕರ ಅಮಾನತು ಪ್ರಶ್ನಿಸಿ, ಪಕ್ಷಕ್ಕಿಂತಲೂ ಮೊದಲೇ ಸ್ಪೀಕರ್ ಯು.ಟಿ. ಖಾದರ್ ಭೇಟಿಯಾಗಿದ್ರು. ಒಂಟಿಯಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ರು. ಇದು ಬಿ.ವೈ. ವಿಜಯೇಂದ್ರ ನಾಯಕತ್ವಕ್ಕೆ ನನ್ನ ಒಪ್ಪಿಗೆ ಇಲ್ಲ ಅನ್ನೋದನ್ನ ಪರೋಕ್ಷವಾಗಿ ತೋರಿಸುತ್ತಿದ್ದಾರೆ.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿದ್ದು, ಹೈಕಮಾಂಡ್ಗೆ ನುಂಗಲಾರದ ತುತ್ತಾಗಿದೆ. ಈಗ ಪಕ್ಷದೊಳಗೆ ಭಿನ್ನಾಭಿಪ್ರಾಯವೂ ಹೆಚ್ಚಾಗ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದ್ರೆ ಮುಂಬರುವ ಸ್ಥಳೀಯ ಚುನಾವಣೆಗಳ ಮೇಲೆ ನೆಗೆಟಿವ್ ಎಫೆಕ್ಟ್ ಬೀರಲಿದೆ. ಇದೆಲ್ಲವನ್ನೂ ಯೋಚಿಸಿರುವ ಹೈಕಮಾಂಡ್ ನಾಯಕರು, ಸರಿಯಾದ ಸಮಯಕ್ಕೆ ಕಾದು, ಇದೀಗ ರಾಜ್ಯಾಧ್ಯಕ್ಷ ಬದಲಾವಣೆ ಅಸ್ತ್ರ ಬಿಟ್ಟಿದ್ದಾರೆ. ತಮ್ಮ ವಿರುದ್ಧ ದನಿ ಎತ್ತಿದವರನ್ನು ಪಕ್ಷದಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ, ವಿಜಯೇಂದ್ರರಿಗೆ, ಹೈಕಮಾಂಡ್ ಮರ್ಮಾಘಾತ ನೀಡಿದೆ. ಇನ್ನು ಕೇವಲ 1 ವಾರದಲ್ಲಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕಿಕ್ಔಟ್ ಆಗ್ತಿದ್ದು, ಮುಂದಿನ ಸಾರಥಿ ಯಾರೆಂಬ ಕುತೂಹಲ ಮೂಡಿದೆ. ಸದ್ಯ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ವಿ. ಸೋಮಣ್ಣ ಹೆಸರು ಮುಂಚೂಣಿಯಲ್ಲಿದ್ದು, ಕೆಲವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಅಧ್ಯಕ್ಷ ಪಟ್ಟ ಒಲಿಯಲಿದೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸಾಮ್ರಾಟ್. ಆರ್. ಅಶೋಕ್ ಈಗಲೂ ರಾಜ್ಯಾಧ್ಯಕ್ಷರಾಗಲೂ ತುದಿಗಾಲ ಮೇಲೆ ನಿಂತಿದ್ದಾರೆ. ಇದೆಲ್ಲದರ ಮಧ್ಯೆ ಅಧ್ಯಕ್ಷ ಪಟ್ಟ ಕೈ ತಪ್ಪುವುದು ಖಚಿತವಾಗುತ್ತಿದ್ದಂತೆ ಬಿ.ವೈ. ವಿಜಯೇಂದ್ರ ಬೇರೆಯದ್ದೇ ಲೆಕ್ಕಾಚಾರ ಮಾಡಿಕೊಂಡಿದ್ದಾರಂತೆ.
ಕರ್ನಾಟಕದಲ್ಲಷ್ಟೇ ಅಲ್ಲ.. ತಮಿಳುನಾಡು ರಾಜಕೀಯದಲ್ಲೂ ಹಲವು ಮಹತ್ವರ ಬದಲಾವಣೆಗಳಾಗಿವೆ. ಕಳೆದ ವಾರವಷ್ಟೇ ತಮಿಳುನಾಡು ರಾಜ್ಯ ಬಿಜೆಪಿಯಲ್ಲೂ ಮಹತ್ತರ ಬದಲಾವಣೆ ನಡೆದಿತ್ತು. ಹೈಕಮಾಂಡ್ ಆದೇಶಿಸುತ್ತಿದ್ದಂತೆ ಏಕಾಏಕಿ ಅಣ್ಣಾಮಲೈ ಅಧ್ಯಕ್ಷ ಸ್ಥಾನ ತ್ಯಜಿಸಿದ್ರು. 2026ಕ್ಕೆ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡು, ಸರ್ಕಾರ ರಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಆದರೆ ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿ ಇರುವುದು ಎಐಎಡಿಎಂಕೆ ನಾಯಕರಿಗೆ ಇಷ್ಟವಿರಲಿಲ್ಲ. ಹೀಗಾಗಿ ಅಧ್ಯಕ್ಷ ಪಟ್ಟದಿಂದಲೇ ಅವರನ್ನು ಕೆಳಗಿಳಿಸಿದೆ. ಹೀಗಾಗಿ ತಮಿಳುನಾಡಲ್ಲೂ ಅಣ್ಣಾಮಲೈರಂತೆ ನಿಷ್ಠೆ, ಪ್ರಾಮಾಣಿಕತೆ ಇರುವ ವ್ಯಕ್ತಿಯನ್ನು, ಅಧ್ಯಕ್ಷರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಹೈಕಮಾಂಡ್ಗೆ ಎದುರಾಗಿದೆ.
ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈರನ್ನು ಕೆಳಗಿಳಿಸಿದ್ದಾಯ್ತು. ವಿಜಯೇಂದ್ರರನ್ನು ಕೆಳಗಿಳಿಸಲು ತಯಾರಿ ನಡೆಸುತ್ತಿದೆ. ಇದಾದ ಬಳಿಕ ಈ ಇಬ್ಬರು ನಾಯಕರಿಗೆ ಹೈಕಮಾಂಡ್, ಯಾವ ಸ್ಥಾನಮಾನ ನೀಡಲಿದೆ ಮತ್ತು ಮಗನಿಗೆ ಸರಿಯಾದ ಸ್ಥಾನಮಾನ ಸಿಗದಿದ್ರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಿನ ನಡೆ ಏನು ಅನ್ನೋ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.