ಹುಬ್ಬಳ್ಳಿ: ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಆರಂಭಗೊಂಡಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ನಿಂತಿಲ್ಲ. ನಿಲ್ಲುವುದು ಇಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದವರು ಯಾವುದೇ ರೀತಿಯ ಅಧ್ಯಯನ ಇಲ್ಲದೇ ಆರ್ಥಿಕ ಸಂಪನ್ಮೂಲ ವಿಷಯಗಳ ಕುರಿತಂತೆ ಅನಾವಶ್ಯಕ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವ ಮುನ್ನ ಒಳ್ಳೆಯ ಸಲಹೆಗಾರರನ್ನಾದರೂ ಅವರು ನೇಮಕ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಜೊತೆಗೆ ಸಿಎಂ ಸಿದ್ದರಾಮಯ್ಯನವರು ಮುಂದಿನ ಎರಡು ವರ್ಷ ಹತ್ತು ತಿಂಗಳವರೆಗೆ ಮುಂದುವರಿಯಲಿದ್ದಾರೆ. ಪಕ್ಷದಲ್ಲಾಗಲಿ, ಸರ್ಕಾರದಲ್ಲಿಯಾಗಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದರು.
ರಾಜ್ಯದ ಪ್ರತಿಯೊಬ್ಬ ಶಾಸಕರಿಗೆ ಬೇಡಿಕೆ ಅನುಸಾರವಾಗಿ ಅನುದಾನ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದ್ದು, ಶಾಸಕರೊಂದಿಗೆ ಸ್ವತಃ ಸಿಎಂ ಮುಖಾಮುಖಿ ಚರ್ಚೆ ನಡೆಸಿ, ಅವರ ಅವಶ್ಯಕತೆಗಳನ್ನು ಆಲಿಸಲಿದ್ದಾರೆ ಎಂದ್ರು.
ರಾಜ್ಯದ ಆರ್ಥಿಕ ಸ್ಥಿತಿ ಅದೋಗತಿ ಎಂಬ ವಿಪಕ್ಷ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರು ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಅಗತ್ಯವಿದ್ದಲ್ಲಿ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿಯವರಿಗೆ ಸಲಹೆ ನೀಡುತ್ತೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ಅರ್ಥವಿಲ್ಲ ಎಂದು ಹೇಳಿದ್ದಾರೆ.