
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ 17ನೇ ಬಜೆಟ್ನಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣದ ಮಾಹಿತಿ ಹೊರಬಿದ್ದಿದೆ. ಈ ಬಾರಿ ಸರ್ಕಾರ ಒಟ್ಟು 1,32,190 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ. ಇದರಲ್ಲಿ ಅತಿ ದೊಡ್ಡ ಮೊತ್ತವನ್ನು ಬಹಿರಂಗ ಮಾರುಕಟ್ಟೆ ಸಾಲದ (Open Market Borrowings) ಮೂಲಕ ಸಂಗ್ರಹಿಸಲಾಗುತ್ತಿದ್ದು, ಬರೋಬ್ಬರಿ 1,22,340 ಕೋಟಿ ರೂಪಾಯಿ ಗುರಿ ಹೊಂದಲಾಗಿದೆ. ಮೂಲಸೌಕರ್ಯ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಈ ಬೃಹತ್ ಸಾಲದ ಮೊತ್ತ ನೆರವಾಗಲಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 6,810 ಕೋಟಿ ರೂಪಾಯಿ ಸಾಲದ ನೆರವು ಸಿಗುವ ನಿರೀಕ್ಷೆಯಿದೆ. ಇದರೊಂದಿಗೆ LIC, NSSF, NCDC ಮತ್ತು RIDF ನಂತಹ ಹಣಕಾಸು ಸಂಸ್ಥೆಗಳಿಂದ ಸರ್ಕಾರವು 2,850 ಕೋಟಿ ರೂಪಾಯಿ ಸಾಲ ಪಡೆಯಲಿದೆ. ಉಳಿದಂತೆ ಸಾಲ ಮತ್ತು ಮುಂಗಡಗಳ ವಸೂಲಾತಿಯಿಂದ 167 ಕೋಟಿ ರೂಪಾಯಿ ಹಾಗೂ ವಿವಿಧ ಬಂಡವಾಳ ಜಮೆಗಳ ಮೂಲಕ 23 ಕೋಟಿ ರೂಪಾಯಿ ಸಂಗ್ರಹಿಸಲು ಸರ್ಕಾರ ಬಜೆಟ್ನಲ್ಲಿ ಯೋಜನೆ ರೂಪಿಸಿದೆ. ಹಣಕಾಸಿನ ಶಿಸ್ತಿನ ನಡುವೆಯೇ ಈ ಸಾಲದ ಮೊತ್ತವನ್ನು ರಾಜ್ಯದ ಪ್ರಗತಿಗೆ ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.




