ಧಾರವಾಡ: ಆತ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದ. ದುಡಿದ ದುಡ್ಡಿನಲ್ಲಿ ತನ್ನ ಜೀವನ ನಡೆಸುತ್ತಿದ್ದ. ಈ ಹಿಂದೆಯೂ ಬೇರೆ ಊರಿನಲ್ಲಿ ಹೋಟೆಲ್‌ ಒಂದರಲ್ಲಿ ಕೆಲಸ ಮಾಡಿ ಧಾರವಾಡದ ಹೋಟೆಲ್‌ ಒಂದಕ್ಕೆ ಬಂದು ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ, ಮಧ್ಯರಾತ್ರಿ ವಿಧಿ ಆತನ ಜೀವನದಲ್ಲಿ ಚೆಲ್ಲಾಟವಾಡಿ ಮಸಣಕ್ಕೆ ಕೊಂಡಿಯ್ದಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈ ವ್ಯಕ್ತಿಯ ಹೆಸರು ಫಕ್ಕೀರೇಶ ಪ್ಯಾಟಿ (40) ಈತ ಮೂಲತಃ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದವನು. ಕೆಲ ವರ್ಷಗಳ ಹಿಂದೆ ಧಾರವಾಡದ ವಿಮಲ್ ಹೋಟೆಲ್‌ನಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ. ಈತನ ಜೊತೆಗೆ ದಾಂಡೇಲಿ ಮೂಲದ ಕನ್ಯಯಪ್ಪ ಕನಯ್ಯ ಎಂಬ ವ್ಯಕ್ತಿ ಕೂಡ ಅದೇ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲ ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರು. ಆದರೆ, ನಿನ್ನೆ ಇವರಿಬ್ಬರ ಮಧ್ಯೆ ಉಂಟಾದ ಗಲಾಟೆ ಕೊನೆಗೆ ಫಕ್ಕೀರೇಶನ ಕೊಲೆಯಲ್ಲಿ ಅಂತ್ಯವಾಗಿದೆ.

ರಾತ್ರಿ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿದೆ. ನಡು ರಾತ್ರಿ ಇಬ್ಬರೂ ಹೊಡೆದಾಡಿ ಕೊಂಡಿದ್ದಾರೆ. ಕೊನೆಗೆ ಕನ್ಯಯಪ್ಪ ಎಂಬಾತ ಕಬ್ಬಿಣದ ರಾಡ್‌ನಿಂದ ಫಕ್ಕೀರೇಶನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಕೊನೆಗೆ ರಕ್ತದ ಮಡುವಿನಲ್ಲಿ ಬಿದ್ದ ಫಕ್ಕೀರೇಶ ಸ್ಥಳದಲ್ಲೇ ಅಸುನೀಗಿದ್ದಾನೆ. ನಡುರಾತ್ರಿ 2 ಗಂಟೆಯ ಸುಮಾರಿಗೆ ಫಕ್ಕೀರೇಶನ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದು, ಆತನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಶವಾಗರದ ಮುಂದೆ ಬಂದು ನಿಂತು ಕಣ್ಣೀರು ಹಾಕುತ್ತಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಹೋಟೆಲ್ ಸಪ್ಲೈಯರ್ ಹಾಗೂ ತಂದೂರಿ ರೊಟ್ಟಿ ಮಾಡುವವನ ಮಧ್ಯೆ ನಡೆದ ಗಲಾಟೆ ಕೊನೆಗೆ ಓರ್ವನ ಬಲಿ ಪಡೆದುಕೊಂಡಿದೆ. ನಡುರಾತ್ರಿ ನಡೆದ ಈ ಘಟನೆ ಧಾರವಾಡಿಗರನ್ನು ಮತ್ತೆ ಬೆಚ್ಚಿ ಬೀಳಿಸಿದೆ. ಕಳೆದ ನಾಲ್ಕು ದಿನಗಳಿಂದ ನಾಲ್ಕು ಕೊಲೆಗಳು ಧಾರವಾಡದಲ್ಲಿ ನಡೆದಿದ್ದು, ಇದರಿಂದ ವಿದ್ಯಾಕಾಶಿ ಎಂದು ಹೆಸರು ಪಡೆದಿರುವ ಧಾರವಾಡ ಕುಖ್ಯಾತಿಯತ್ತ ಸಾಗುತ್ತಿದೆಯಾ ಎಂಬ ಸಂಶಯ ಕಾಡುತ್ತಿದೆ.

By admin

Leave a Reply

Your email address will not be published. Required fields are marked *

Verified by MonsterInsights