ರಾಜ್ಯವಾಣಿಜ್ಯ

ಪೇಟಿಎಂ ಪೇಮೆಂಟ್ಸ್ ಗೆ ಆರ್ ಬಿ ಐ ಶಾಕ್..! ಗ್ರಾಹಕರಿಗೂ ತಟ್ಟುತ್ತಾ ನಿಷೇಧದ ಬಿಸಿ..?

ಬೆಂಗಳೂರು :  ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ಹಲವು ನಿರ್ಬಂಧಗಳನ್ನು ವಿಧಿಸಿದೆ. ಹೊಸ ಗ್ರಾಹಕರನ್ನು ಸ್ವೀಕರಿಸಬಾರದು; ಹೊಸ ಡೆಪಾಸಿಟ್ ಪಡೆಯಬಾರದು; ಫೆಬ್ರುವರಿ 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಜೋಡಿತವಾದ ವ್ಯಾಲಟ್, ಫಾಸ್​ಟ್ಯಾಗ್ ಇತ್ಯಾದಿ ಪ್ರೀಪೇಡ್ ಯಂತ್ರಗಳಿಗೆ ಟಾಪಪ್ ಹಾಕಿಸುವಂತಿಲ್ಲ ಎಂದು ಆರ್​ಬಿಐ ನಿರ್ಬಂಧ ಹಾಕಿದೆ.

ಪೇಟಿಎಂ ಆ್ಯಪ್​ಗೂ ಇದಕ್ಕೂ ಸಂಬಂಧ ಇಲ್ಲ

ಇದು ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್​ಗೆ ಮಾತ್ರ ಹಾಕಲಾಗಿರುವ ನಿರ್ಬಂಧ. ಪೇಟಿಎಂ ಆ್ಯಪ್​ನಲ್ಲಿರುವ ಬೇರೆಲ್ಲಾ ಯುಪಿಐ ವಹಿವಾಟು ಸೇವೆಗಳನ್ನು ಪಡೆಯಬಹುದಾಗಿದೆ. ಪೇಟಿಎಂ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವಿದ್ಯುತ್, ನೀರು ಇತ್ಯಾದಿ ಬಿಲ್​ಗಳನ್ನು ಮಾಮೂಲಿಯಾಗಿ ನೀವು ಪಾವತಿಸಬಹುದು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಯಾಕೆ ನಿರ್ಬಂಧ?

ಹೊರಗಿನ ಆಡಿಟರ್​ಗಳು ಪೇಟಿಎಂ ಬ್ಯಾಂಕ್​ನಲ್ಲಿ ಆಡಿಟಿಂಗ್ ಮಾಡಿವೆ. ಬ್ಯಾಂಕಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂಬ ವಿಚಾರ ಆಡಿಟಿಂಗ್​ನಿಂದ ಗೊತ್ತಾಗಿದೆ. ಎರಡು ವರ್ಷದ ಹಿಂದೆಯೇ ಇದು ನಡೆದಿತ್ತು. 2022ರ ಮಾರ್ಚ್ ತಿಂಗಳಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಗ್ರಾಹಕರನ್ನು ಹೊಂದಬಾರದು ಎಂದು ಆರ್​ಬಿಐ ನಿರ್ಬಂಧ ಹಾಕಿತ್ತು. ಇದೀಗ 2024ರ ಫೆಬ್ರುವರಿ 29ರ ನಂತರ ಪ್ರೀಪೇಡ್ ಇನ್ಸ್​ಟ್ರುಮೆಂಟ್ಸ್, ವ್ಯಾಲಟ್ಸ್, ಫಾಸ್​ಟ್ಯಾಗ್, ಎನ್​ಸಿಎಂಸಿ ಕಾರ್ಡ್ ಇತ್ಯಾದಿಗೆ ಹಣ ರವಾನಿಸುವಂತಿಲ್ಲ, ಟಾಪಪ್ ಹಾಕುವಂತಿಲ್ಲ ಎಂದು ಆರ್​ಬಿಐ ಆದೇಶಿಸಿದೆ.

ಈ ಮೊದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿರುವವರ ಖಾತೆಗೆ ಕ್ಯಾಷ್​ಬ್ಯಾಕ್, ಬಡ್ಡಿ, ರೀಫಂಡ್ ಇತ್ಯಾದಿಯನ್ನು ಹಾಕಲು ಅಡ್ಡಿ ಇಲ್ಲ. ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವವರು ತಮ್ಮ ಹಣವನ್ನು ಸಂಪೂರ್ಣ ವಿತ್​ಡ್ರಾ ಮಾಡಿಕೊಳ್ಳಲು ಯಾವುದೇ ಅಡ್ಡಿ ಆಗಬಾರದು ಎಂದೂ ಆರ್​ಬಿಐ ಸೂಚಿಸಿದೆ. ಹಾಗೆಯೇ, ಪೇಟಿಎಂ ಮಾಲೀಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ನ ನೋಡಲ್ ಅಕೌಂಟ್​​ಗಳನ್ನು ಫೆಬ್ರುವರಿ 29ರೊಳಗೆ ನಿಲ್ಲಿಸುವಂತೆಯೂ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ನಿರ್ಬಂಧ ಹೇರಿದ ಬೆನ್ನಲ್ಲೇ ಪೇಟಿಎಂ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಒಟ್ನಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ರ ಕನಸಿನ ಪೇಟಿಎಂಗೆ ಆರ್ ಬಿ ಐ ಕೊಕ್ಕೆ ಹಾಕಿದೆ..ಮುಂದೇನಾಗುತ್ತೋ ಕಾದು ನೋಡಬೇಕು.

Comments (0)

Your email address will not be published. Required fields are marked *

Back to top button