ರಾಜ್ಯಸುದ್ದಿ

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರ ಪೀಠವು, ಉಭಯ ರಾಜ್ಯಗಳ ವಾದಗಳನ್ನು ಆಲಿಸಿ ತೀರ್ಮಾನ ಕೈಗೊಳ್ಳಲು ನ್ಯಾಯಮಂಡಳಿಯೇ ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟಿದೆ.

ವಿವಾದದ ಮೂಲವು ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದು ಮತ್ತು ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಿಂದ ತಮ್ಮ ಪಾಲಿನ ನೀರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ತಮಿಳುನಾಡು 2018ರಲ್ಲಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ಹಿಂದೆ ಕೇಂದ್ರ ಜಲಶಕ್ತಿ ಸಚಿವಾಲಯವು ನಡೆಸಿದ ಸಂಧಾನ ಸಭೆಗಳು ವಿಫಲವಾಗಿದ್ದವು ಮತ್ತು ಕರ್ನಾಟಕವು ಹೊಸದಾಗಿ ಸಂಧಾನಕ್ಕೆ ಒತ್ತಾಯಿಸಿದ್ದರೂ, ಯಾವುದೇ ಒಮ್ಮತ ಮೂಡಿರಲಿಲ್ಲ.

ಕರ್ನಾಟಕ ಸರ್ಕಾರದ ವಾದದ ಪ್ರಕಾರ, ರಾಜ್ಯದ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಉಳಿದ 2 ಟಿಎಂಸಿ ಹಾಗೂ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿಯುತ್ತಿರುವುದರಿಂದ ಅವರ ಅವಶ್ಯಕತೆಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಮಂಡಳಿ ರಚನೆಯಾದಲ್ಲಿ, ಕಾವೇರಿ ವಿವಾದದ ಮಾದರಿಯಲ್ಲೇ ಪೆನ್ನಾರ್ ನದಿ ನೀರಿನ ಹಂಚಿಕೆಯೂ ಕಾನೂನುಬದ್ಧ ಹೋರಾಟಕ್ಕೆ ಸಾಕ್ಷಿಯಾಗಲಿದೆ.

Comments (0)

Your email address will not be published. Required fields are marked *

Back to top button