ಬಳ್ಳಾರಿ : ಮಲೆನಾಡಿನಲ್ಲಿ ಮಳೆ ಸುರಿದರೆ ಗಣಿಜಿಲ್ಲೆಯಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದೆ. ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ್ದರಿಂದ ಜಿಲ್ಲೆವ್ಯಾಪ್ತಿಯ ನದಿ ಪಾತ್ರದ ಕಂಪ್ಲಿ, ಸಿರುಗುಪ್ಪ ತಾಲೂಕುಗಳ 19 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿಸಿದರೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆ ಸಂಪರ್ಕಿಸುವ ಸಂಪರ್ಕ ಕೊಂಡಿಯಾಗಿರುವ ಕಂಪ್ಲಿಯ ತುಂಗಭದ್ರಾ ನದಿ ಸೇತುವೆ ಮುಳುಗಿ ರಸ್ತೆ ಸಂಚಾರ ಕಡಿತಗೊಳ್ಳಲಿದೆ. ಕಳೆದ ಒಂದು ವರ್ಷದಿಂದ ಬರಿದಾಗಿದ್ದ ತುಂಗಭದ್ರಾ ಜಲಾಶಯ ಭರ್ತಿಯಾಗಿರುವುದು ಒಂದೆಡೆ ಸಂತಸ ಮೂಡಿಸಿದರೆ, ಮತ್ತೊಂದೆಡೆ ಸಂಕಷ್ಟ ತಂದೊಡ್ಡಿದೆ. ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಭರ್ತಿಯಾಗಿ, ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಸದ್ಯದ ನೀರಿನ ಮಟ್ಟ:
ಜು.1 ರಂದು ಜಲಾಶಯದಲ್ಲಿ ಕೇವಲ 6.782ಟಿಎಂಸಿ ನೀರು ಸಂಗ್ರಹಗೊಂಡಿತ್ತು. ಜು.25ರ ವೇಳೆಗೆ 102.215 ಟಿಎಂಸಿ ನೀರು ಸಂಗ್ರಹಗೊಂಡಿದೆ. ದಿನದಿಂದ ದಿನಕ್ಕೆ ಒಳಹರಿವು ಗಣನೀಯ ಹೆಚ್ಚುತ್ತಿದೆ. ಜು.15ರಿಂದ ಕೇವಲ 10ದಿನಗಳಲ್ಲಿ69.141 ಟಿಎಂಸಿ ನೀರು ಜಲಾಶಯದ ಒಡಲು ಸೇರಿದೆ. ಹೆಚ್ಚುವರಿ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ಜನತೆಗೆ ಎಚ್ಚರಿಕೆವಹಿಸುವಂತೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ಈಗಾಗಲೇ ಸಂದೇಶ ರವಾನಿಸಿದ್ದಾರೆ.
ಜಿಲ್ಲಾಡಳಿತದ ಮುಂಜಾಗ್ರತೆ:
ತುಂಗಭದ್ರಾ ಜಲಾಶಯದಿಂದ ನದಿಗೆ 1.50ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದಲ್ಲಿ ಜಿಲ್ಲೆಯ ಸಿರುಗುಪ್ಪ ಮತ್ತು ಕಂಪ್ಲಿತಾಲೂಕುಗಳ 9 ಗ್ರಾಪಂ ವ್ಯಾಪ್ತಿಯ 19 ಗ್ರಾಮಗಳಲ್ಲಿ ಪ್ರವಾಹ ಉಂಟಾಗುವುದನ್ನು ಗುರುತಿಸಲಾಗಿದೆ. ನದಿ ಪಾತ್ರದ ಜನರ ರಕ್ಷಣೆಯ ಮುಂಜಾಗ್ರತಾ ಕ್ರಮವಾಗಿ 36 ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸ್ಥಳ ಗುರುತಿಸಿದೆ. 2 ಎನ್‌ಡಿಆರ್‌ಎಫ್ ತಂಡಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಇರಿಸಲಾಗಿದೆ. ನದಿಪಾತ್ರದ ಗ್ರಾಮಗಳಲ್ಲಿ ಡಂಗೂರ, ಮೈಕ್ ಮೂಲಕ ಅಪಾಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ.
ನದಿ ಪಾತ್ರದಲ್ಲಿ ಹೆಚ್ಚಿದ ಆತಂಕ:
ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬರಗಾಲ ಆವರಿಸಿತ್ತು. ಪ್ರಸಕ್ತ ಮುಂಗಾರಿನಲ್ಲಿ ಬೀಜ ಬಿತ್ತನೆಯ ಆಶಾಭಾವನೆ ಹೊಂದಿದ್ದಾರೆ. ಆದರೆ, ಬಿತ್ತನೆಯ ಹೊತ್ತಲ್ಲಿ ಮಳೆಯೊಂದಿಗೆ ಪ್ರವಾಹ ಆತಂಕ ರೈತರಲ್ಲಿ ಮನೆಮಾಡಿದೆ. ತುಂಗಭದ್ರಾ ನದಿ, ಕಾಲುವೆಗಳ ವ್ಯಾಪ್ತಿಯ ಬೆಳೆಗಳಿಗೆ ನೀರು ನುಗ್ಗುವ ಚಿಂತೆ ಈಗಿನಿಂದಲೇ ಆರಂಭವಾಗಿದೆ.ಬಳ್ಳಾರಿ, ಕಂಪ್ಲಿಮತ್ತು ಸಿರುಗುಪ್ಪ ತಾಲೂಕುಗಳ ತುಂಗಭದ್ರಾ, ಹಾಗೂ ವೇದಾವತಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ಜನ, ಜನವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನೂ ಗುರುತಿಸಲಾಗಿದೆ. ತಹಸೀಲ್ದಾರ್, ತಾಪಂ ಇಒ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿತಂಡಗಳನ್ನು ರಚಿಸಲಾಗಿದೆ.
28 ಕ್ರಸ್ಟ್‌ಗೇಟ್ ತೆರೆದು ನದಿಗೆ ನೀರು
ತುಂಗಭದ್ರಾ ಜಲಾಶಯ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ ಗುರುವಾರದವರೆಗೆ ಜಲಾಶಯದಲ್ಲಿ 102.576 ಟಿಎಂಸಿ ನೀರು ಸಂಗ್ರಹವಾಗಿದ್ದು, 1632.20 ಅಡಿ ಜಲಾಶಯ ಮಟ್ಟ ದಾಖಲಾಗಿದೆ. 81,030 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಈ ಹಿನ್ನೆಲೆ ಹೆಚ್ಚುವರಿ ನೀರನ್ನು ಕಳೆದ ಮೂರು ದಿನಗಳಿಂದ ನದಿಗೆ ಹರಿಸಲಾಗುತ್ತಿದೆ. ಸದ್ಯದ ಮಟ್ಟಿಗೆ ಒಟ್ಟು 28 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದ್ದು, 20 ಗೇಟ್‌ಗಳನ್ನು 2 ಅಡಿ ಮತ್ತು 8 ಗೇಟ್‌ಗಳನ್ನು 1 ಅಡಿ ಮೇಲಕ್ಕೆ ಎತ್ತರಿಸಿ ಒಟ್ಟು 75,774 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮೊದಲಿಗೆ ಮೂರು ಬಳಿಕ ಒಟ್ಟು ಹತ್ತು ಹಾಗೂ ಈಗ 28 ಗೇಟ್‌ಗಳನ್ನು ತೆರೆದಿದ್ದು, ಇನ್ನೂ ಒಳಹರಿವಿನ ಪ್ರಮಾಣವನ್ನು ಆಧರಿಸಿ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಲಿದೆ ಎಂದು ಟಿಬಿ ಬೋರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.