ಶ್ರೀಕೃಷ್ಣ ಜನ್ಮಸ್ಥಾನ ಮಥುರಾ ಹಾಗೂ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದು, ಮೊಘಲ್ ದೊರೆ ಔರಂಗಜೇಬ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದ ಮಂದಿರವನ್ನು ಕೆಡವಿ ಮಸೀದಿ ಕಟ್ಟಿದ ಎಂದು ಪುರಾತತ್ವ ಇಲಾಖೆಯೂ ಆರ್‌ಟಿಐ ಅರ್ಜಿದಾರರೊಬ್ಬರ ಪ್ರಶ್ನಗೆ ಉತ್ತರ ನೀಡಿದೆ ಎನ್ನಲಾಗಿದೆ.
ದೇವಾಲಯವನ್ನು ಕೆಡವಿ ಔರಂಗಜೇಬ್ ನಿರ್ಮಿಸಿದ ಮಸೀದಿಯ ಸ್ಥಳದಲ್ಲಿ ಈಗ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರ್‌ಟಿಐ ಅರ್ಜಿದಾರನೋರ್ವನ ಪ್ರಶ್ನೆಗೆ ಆಗ್ರಾದ ಪುರಾತತ್ವ ಇಲಾಖೆಯು ಉತ್ತರಿಸಿದೆ.
ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಸ್ಥಾನದ ವಿವಾದವೂ ಅಯೋಧ್ಯೆಯಂತೆಯೇ ಇದ್ದು, ಭಾರತಕ್ಕೆ ಬಂದು ಮುಸ್ಲಿಂ ದಾಳಿಕೋರ ಔರಂಗಜೇಬ್ ಮಥುರಾದಲ್ಲಿನ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದ. 1670ರಲ್ಲಿ ಮಥುರಾದ ಕೇಸರಿ ಕೇಶವದೇವನ ದೇವಾಲಯವನ್ನು ಕೆಡವಲು ಆತ ಆದೇಶ ನೀಡಿದ್ದ, ಇದಾದ ನಂತರ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗುತ್ತದೆ.
13.37 ಎಕರೆ ಜಮೀನಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಈ ವಿವಾದ ಇದ್ದು, ಶ್ರೀ ಕೃಷ್ಣ ಜನ್ಮಸ್ಥಾನವು 10.9 ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿಯು ಎರಡೂವರೆ ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದೆ. ಹಿಂದೂ ಸಮುದಾಯವೂ ಈ ಎರಡೂವರೆ ಎಕರೆ ಕೂಡ ಅಕ್ರಮ ಒತ್ತುವರಿಯಿಂದ ಪಡೆದ ಜಾಗವಾಗಿದ್ದು, ಈ ಭೂಮಿ ಕೂಡ ಮಥುರಾ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಸೇರಿದ್ದಾಗಿದ್ದು, ಇಲ್ಲಿರುವ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಅಲ್ಲಿನ ಸಂಪೂರ್ಣ ಭೂಮಿಯನ್ನು ಶ್ರಿಕೃಷ್ಣ ಜನ್ಮಸ್ಥಾನಕ್ಕೆ ನೀಡಬೇಕು ಎಂಬುದು ಹಿಂದುಗಳ ಬೇಡಿಕೆಯಾಗಿದೆ.
ದೆಹಲಿಯ ಮೈನ್‌ಪುರಿಯ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಎಂಬುವವರು ಆರ್‌ಟಿಐ ಅಡಿಯಲ್ಲಿ ದೇಶಾದ್ಯಂತ ಇರುವ ದೇವಾಲಯಗಳ ಬಗ್ಗೆ ಪುರಾತತ್ವ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಇದರಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳದ ಬಗ್ಗೆಯೂ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಭಾರತದ ಪುರಾತತ್ವ ಇಲಾಖೆಯು 1920 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಕಟವಾದ ಗೆಜೆಟ್ ಆಧಾರದ ಮೇಲೆ ಮಥುರಾದಲ್ಲಿ ಮೊದಲು, ಮಸೀದಿ ಇದ್ದ ಜಾಗದಲ್ಲಿ ಕತ್ರಾ ಕೇಶವದೇವ ದೇವಾಲಯವಿತ್ತು ನಂತರದಲ್ಲಿ ಔರಂಗಜೇಬನ ಕಾಲಘಟ್ಟದಲ್ಲಿ ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಪುರಾತತ್ವ ಇಲಾಖೆ ಉತ್ತರ ನೀಡಿದೆ.