Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsವಶಕ್ಕೆ ಪಡೆದ ಸಾಧನಗಳ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್‌ 18 ಅಂಶಗಳ ಮಹತ್ವದ ಮಾರ್ಗಸೂಚಿ ಆದೇಶ

ವಶಕ್ಕೆ ಪಡೆದ ಸಾಧನಗಳ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್‌ 18 ಅಂಶಗಳ ಮಹತ್ವದ ಮಾರ್ಗಸೂಚಿ ಆದೇಶ

ಬೆಂಗಳೂರು: ಕಳವು ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಲ್ಯಾಪ್‌ಟಾಪ್, ಮೊಬೈಲ್‌ ಮತ್ತಿತರ ವಿದ್ಯುನ್ಮಾನ ಹಾಗೂ ಡಿಜಿಟಲ್‌ ಸಾಧನಗಳನ್ನು ಅವುಗಳ ಮಾಲೀಕರಿಗೆ ಬಿಡುಗಡೆ ಮಾಡುವ ಕುರಿತು ಕರ್ನಾಟಕ ಹೈಕೋರ್ಟ್‌ 18 ಅಂಶಗಳ ಮಾರ್ಗಸೂಚಿ ಹೊರಡಿಸಿದೆ.

ಈ ಪ್ರಕರಣ ಸಂಬಂಧ ಸರಕಾರ ಅಧಿಕೃತ ನಿಯಮಗಳನ್ನು ರೂಪಿಸುವವರೆಗೂ ಈ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ನ್ಯಾಯಾಲಯ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ಅಂಗಡಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬಿಡುಗಡೆ ಕೋರಿ ವಿಶಾಲ್‌ ಖಟ್ವಾನಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ, ಈ ಮಹತ್ವದ ತೀರ್ಪು ನೀಡಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ

”ವಶಪಡಿಸಿಕೊಂಡ ಉಪಕರಣಗಳ ಮೌಲ್ಯವನ್ನು ತನಿಖಾಧಿಕಾರಿಗಳು ಎಫ್‌ಐಆರ್‌ನಲ್ಲಿ ತೋರಿಸಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿಯೂ ವಿವರಿಸಿಲ್ಲ. ಆದರೂ, ಎಲ್ಲ ವಸ್ತುಗಳ ಬಿಡುಗಡೆಗೆ ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿಟ್ಟು, ಅರ್ಜಿದಾರರಿಂದ 40 ಲಕ್ಷ ರೂಪಾಯಿಗಳ ಬಾಂಡ್‌ ಪಡೆದು ಎಲ್ಲ ವಸ್ತುಗಳನ್ನು ಬಿಡುಗಡೆ ಮಾಡಬೇಕು,” ಎಂದು ನ್ಯಾಯಾಲಯ ಆದೇಶಿಸಿದೆ.

”ವಿದ್ಯುನ್ಮಾನ ಉಪಕರಣಗಳು, ಡಿಜಿಟಲ್‌ ಸಾಧನಗಳು, ವೈದ್ಯಕೀಯ ಮಾದರಿಗಳು, ಆಹಾರ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು, ಶೀಘ್ರದಲ್ಲಿ ಹಾಳಾಗುವಂತಹ ವಸ್ತುಗಳು, ಚಿನ್ನ ಮತ್ತು ಬೆಳ್ಳಿಯಂತಹ ಬೆಲೆ ಬಾಳುವಂತಹ ವಸ್ತುಗಳನ್ನು ವಶಪಡಿಸಿಕೊಂಡು ಅದನ್ನು ಬಿಡುಗಡೆ ಮಾಡುವ ಸಂಬಂಧ ರಾಜ್ಯ ಸರಕಾರ ಅಗತ್ಯ ನಿಯಮಗಳನ್ನು ರೂಪಿಸಬೇಕು,” ಎಂದು ಆದೇಶಿಸಿದೆ.

ಮುಖ ಮಾರ್ಗಸೂಚಿಗಳು

  • ತನಿಖಾಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ನ್ಯಾಯಾಲಯ ಬಿಡುಗಡೆಗೆ ಸೂಚನೆ ನೀಡಿದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರತಿಯೊಂದು ವಸ್ತು ಇರುವ ಸಂಬಂಧ ಖಚಿತಪಡಿಸಿಕೊಳ್ಳಬೇಕು.
  • ಮಹಜರ್‌ ಮಾಡಿ ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳು ಬಿಡುಗಡೆ ವೇಳೆ ಹೊಂದಾಣಿಕೆಯಾಗಬೇಕು. ಮಹಜರ್‌ ಸಂದರ್ಭದಲ್ಲಿ ದಾಖಲೆಗಳಲ್ಲಿ ಕ್ರಮ ಸಂಖ್ಯೆಗಳನ್ನು, ಅವುಗಳ ವಿಶಿಷ್ಟ ಗುರುತುಗಳನ್ನು ನಮೂದಿಸಬೇಕು.
  • ವಶಪಡಿಸಿಕೊಂಡ ಆಸ್ತಿಯ ಅಂದಾಜು ಮೌಲ್ಯವನ್ನು ಮಹಜರ್‌ನಲ್ಲಿ ಉಲ್ಲೇಖಿಸಬೇಕು. ಈ ಅಂಶ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದಲ್ಲಿತಿಳಿಸಬೇಕು.
  • ಈ ಎಲ್ಲ ವಸ್ತುಗಳನ್ನು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರು ವೈಯಕ್ತಿಕವಾಗಿ ಪರಿಶೀಲಿಸಿ, ಅದರ ಅಂದಾಜು ಮೊತ್ತ ಹೋಲಿಕೆಯಾಗುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.
  • ವಶಪಡಿಸಿಕೊಳ್ಳುವುದು ಮತ್ತು ಬಿಡುಗಡೆ ಮಾಡುವ ಸಂದರ್ಭದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಮಾಲೀಕರ ಸಹಿ ಪಡೆದು ಆ ಸಂಬಂಧದ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.
  • ವಶಪಡಿಸಿಕೊಂಡ ಆಸ್ತಿಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದು ಮತ್ತು ಅವುಗಳ ದಾಖಲೆಗಳನ್ನು ಸಂಗ್ರಹಿಸಬೇಕು ಮತ್ತು ಅದರ ಮೌಲ್ಯಕ್ಕೆ ಸಂಬಂಧಿಸಿದಂತೆ ಬಾಂಡ್‌/ ಬ್ಯಾಂಕ್‌ ಗ್ಯಾರೆಂಟಿಗಳನ್ನು ಪಡೆದುಕೊಳ್ಳಬೇಕು.
  • ವಿದ್ಯುನ್ಮಾನ ಮತ್ತು ಡಿಜಿಟಲ್‌ ವಸ್ತುಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಸಂರಕ್ಷಣೆ ಮಾಡಲು ಅಗತ್ಯವಿರುವ ವಾತಾವರಣವಿರುವ ಸಂಬಂಧ ಸ್ಪಷ್ಟಪಡಿಸಿಕೊಳ್ಳಬೇಕು ಮತ್ತು ಅವುಗಳಲ್ಲಿನ ದತ್ತಾಂಶ ಹಾಳಾಗದಂತೆ ನೋಡಿಕೊಳ್ಳಬೇಕು.
  • ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ಚಿನ್ನಾಭರಣಗಳನ್ನು ಬೆರಳಚ್ಚು, ಗುರುತು ಪರೀಕ್ಷೆ ಸೇರಿ ಪರೀಕ್ಷೆ ಉದ್ದೇಶಕ್ಕಾಗಿ ತನಿಖಾಧಿಕಾರಿಗಳಿಗೆ ಅಗತ್ಯವಿಲ್ಲದಿದ್ದಲ್ಲಿ ಅವುಗಳ ಛಾಯಾಚಿತ್ರಗಳನ್ನು ತೆಗೆದಿಟ್ಟುಕೊಂಡು ವಸ್ತುಗಳನ್ನು ಅರ್ಜಿದಾರರಿಗೆ ಹಿಂದಿರುಗಿಸಬಹುದು.
  • ನಗದು ಮತ್ತು ಹಣದ ನೋಟುಗಳನ್ನು ಛಾಯಾಚಿತ್ರ /ವಿಡಿಯೋಗ್ರಫಿ ಮತ್ತು ಅವುಗಳ ಕ್ರಮ ಸಂಖ್ಯೆ ಮಹಜರಿನಲ್ಲಿ ಬರೆದು ತಕ್ಷಣ ಆರ್‌ಬಿಐ ಬ್ಯಾಂಕ್‌ಗೆ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು.
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments