ಬೆಂಗಳೂರು : 26 ವರ್ಷದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ತಳ್ಳಿಹಾಕಿದ್ದಾರೆ ಮತ್ತು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ಬಿಜೆಪಿ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
‘ಬಿಜೆಪಿಯವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ. ಏಕೆಂದರೆ, ನಾನು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ನಾನು ಆರ್‌ಎಸ್‌ಎಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ ಮತ್ತು ನಾನು ಅದರ ಬಗ್ಗೆ ದನಿಯೆತ್ತಿದ್ದೇನೆ. ಅಲ್ಲದೆ, ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ. ಆದ್ದರಿಂದ ಅವರು ಸಹಜವಾಗಿ ಇಂತಹ ವಿಚಾರಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ. ಸಂತ್ರಸ್ತರಲ್ಲಿ ಯಾರಿಗಾದರೂ ನ್ಯಾಯ ದೊರಕಿಸಿಕೊಡಲು ಬಿಜೆಪಿಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಮೊದಲು ವಿಜಯೇಂದ್ರ ತನ್ನ ತಂದೆಯ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ತಾವು ರಾಜೀನಾಮೆ ನೀಡಲಿ’ ಎಂದು ಸವಾಲೆಸೆದರು.