Thursday, November 20, 2025
19.1 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಭೂ ವಿಜ್ಞಾನಿ ಪ್ರತಿಮಾ ಕೊಲೆ ಕೇಸ್ : 600 ಪುಟಗಳ ಚಾರ್ಜ್ ಶೀಟ್ ನಲ್ಲಿ ಏನಿದೆ?

ಭೂ ವಿಜ್ಞಾನಿ ಪ್ರತಿಮಾ ಕೊಲೆ ಕೇಸ್ : 600 ಪುಟಗಳ ಚಾರ್ಜ್ ಶೀಟ್ ನಲ್ಲಿ ಏನಿದೆ?

ಬೆಂಗಳೂರು : ಅವತ್ತು ಎಲ್ಲವೂ ಸರಿ ಇದ್ದಿದ್ರೆ, ಆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬದುಕಿರುತ್ತಿದ್ದರು.. ಆದ್ರೆ, ಅವನೊಬ್ಬ ಸೇಡಿನ ಹಪಾಹಪಿಗೆ ಬಿದ್ದು, ಜಸ್ಟ್ ಎಂಟು ನಿಮಿಷದಲ್ಲಿ ಕೊಂದು 5 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದ.. ಹೌದು… ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಹತ್ಯೆ ಪ್ರಕರಣದ ಕುರಿತು ಬೆಂಗಳೂರು ಪೊಲೀಸರು ಆರೋಪಿ ಕಿರಣ್ ಬಂಧಿಸಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

2023ರ ನವೆಂಬರ್ 4ರಂದು ಪ್ರತಿಮಾ ಬಳಿ ಹಿಂದೆ ಕಾರು ಚಾಲಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಿರಣ್ ಹತ್ಯೆ ಮಾಡಿದ್ದ. ಬೆಂಗಳೂರಿನ ದೊಡ್ಡಕಲ್ಲಸಂದ್ರದ ಕುವೆಂಪು ನಗರದ ನಿವಾಸದಲ್ಲಿ ಪ್ರತಿಮಾ ಹತ್ಯೆ ನಡೆದಿತ್ತು. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ಸ್‌ಪೆಕ್ಟರ್ ಎನ್. ಜಗದೀಶ್ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದರು. ಕೊಲೆ ನಡೆದ ಮರುದಿನವೇ ಆರೋಪಿ ಕಿರಣ್ ಬಂಧಿಸಲಾಗಿತ್ತು. ಆತ ಸಹ ತಪ್ಪೊಪ್ಪಿಕೊಂಡಿದ್ದ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನಗರದ 2ನೇ ಎಸಿಎಂಎಂ ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದ್ದಾರೆ.
8 ನಿಮಿಷದಲ್ಲಿ ಹತ್ಯೆ, 5 ಲಕ್ಷ ಹಣ ಕದ್ದು ಪರಾರಿ; ಪ್ರತಿಮಾ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು 600 ಪುಟಗಳ ಚಾರ್ಜ್‌ ಶೀಟ್‌ನಲ್ಲಿ ಆರೋಪಿ ಕಿರಣ್ ಹೇಳಿಕೆ, 70 ಸಾಕ್ಷಿದಾರರ ಹೇಳಿಕೆ, ಸಿಸಿಟಿವಿ ದೃಶ್ಯಾವಳಿಗಳ, ಸಾಂದರ್ಭಿಕ ಸಾಕ್ಷ್ಯಗಳು, ಡಿಜಿಟಲ್ ಸಾಕ್ಷ್ಯಗಳನ್ನು ಸೇರಿಸಿದ್ದಾರೆ.

ಆರೋಪಿ ಗುತ್ತಿಗೆ ಆಧಾರದ ಮೇಲೆ ಪ್ರತಿಮಾ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ಕ್ರಿಮಿನಲ್ ಹಿನ್ನಲೆ ಇರುವ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಚಾಲಕನನ್ನು ನೇಮಿಸಿದ್ದರು. ಆದರೆ ಕಿರಣ್ ಪದೇ ಪದೇ ಕೆಲಸಕ್ಕೆ ತೆಗೆದುಕೊಳ್ಳುವಂತೆ ಪ್ರತಿಮಾರನ್ನು ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಕೊಲೆಗೆ ಸಂಚು ರೂಪಿಸಿದ್ದ.

ಚಾರ್ಜ್‌ ಶೀಟ್‌ನಲ್ಲಿ ಪೊಲೀಸರು ಕಿರಣ್‌ಗೆ ಪ್ರತಿಮಾ ಮನೆಯಲ್ಲಿ ಒಂಟಿಯಾಗಿರುವುದು ತಿಳಿದಿತ್ತು. ಆದ್ದರಿಂದ ಅವರನ್ನು ಹತ್ಯೆ ಮಾಡಲು ನವೆಂಬರ್ 3ರಂದು ಮನೆಗೆ ಆಗಮಿಸಿದ್ದ. ಆದರೆ ಅವರು ಸಿಗದೇ ವಾಪಸ್ ತೆರಳಿದ್ದ. ನವೆಂಬರ್ 4ರಂದು ರಾತ್ರಿ 8 ಗಂಟೆ ಸುಮಾರಿಗೆ ಮತ್ತೆ ಪ್ರತಿಮಾ ಮನೆ ಬಳಿ ಬಂದು ಟೆರಸ್‌ನಲ್ಲಿ ಅವಿತು ಕುಳಿತಿದ್ದ.

ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಪ್ರತಿಮಾ ಮನೆಗೆ ಬಂದಿದ್ದರು. ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅವರನ್ನು ಹಿಂಬಾಲಿಸಿ, ಬಾಯಿ ಮುಚ್ಚಿದ್ದ. ಬಳಿಕ ವೇಲ್‌ನಿಂದ ಅವರ ಕುತ್ತಿಗೆ ಬಿಗಿದಿದ್ದ. ಬಳಿಕ ಚಿನ್ನದ ಬಳೆ, ಚಿನ್ನದ ಸರ, ಕಬೋಡ್‌ನಲ್ಲಿ ಸಿಕ್ಕ 5 ಲಕ್ಷ ರೂ. ತೆಗೆದುಕೊಂಡು ಪರಾರಿಯಾಗಿದ್ದ.
ಒಟ್ಟು 8 ನಿಮಿಷದಲ್ಲಿಯೇ ಪ್ರತಿಮಾರನ್ನು ಕೊಲೆ ಮಾಡಿ, ಹಣ ತೆಗೆದುಕೊಂಡು ಆರೋಪಿ ಕಿರಣ್ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಮನೆಯಿಂದ ಹೊರ ಬಂದು ಕೊಂಚ ದೂರ ಹೋದ ಮೇಲೆ ಸ್ನೇಹಿತರಿಗೆ ಕರೆ ಮಾಡಿದ್ದ. ಬಳಿಕ ಅಲ್ಲಿಂದ ಸ್ನೇಹಿತರ ಜೊತೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ.

ಪ್ರತಿಮಾ ಮನೆಯಲ್ಲಿ 5 ಲಕ್ಷ ರೂ. ಹಣವನ್ನು ಶಿವ ಎಂಬ ಸ್ನೇಹಿತನಿಗೆ ಕಿರಣ್ ಕೊಟ್ಟಿದ್ದ. ಹಣ ಮನೆಯಲ್ಲಿ ಇಟ್ಟುಕೊಂಡಿರು, ಮಲೆ ಮಹದೇಶ್ವರ ಬೆಟ್ಟದಿಂದ ಬಂದ ಬಳಿಕ ವಾಪಸ್ ಕೊಡು ಎಂದು ತಿಳಿಸಿದ್ದ. ಹಣದ ಮೂಲದ ಕುರಿತು ಕೇಳದ ಶಿವ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ.

ಆರೋಪಿ ಕಿರಣ್ ಮಲೆ ಮಹದೇಶ್ವರ ಬೆಟ್ಟದಲ್ಲಿದ್ದಾಗಲೇ ಪ್ರತಿಮಾ ಹತ್ಯೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಅದನ್ನು ನೋಡಿ ಸ್ನೇಹಿತರ ಬಳಿ ಆಶ್ಚರ್ಯ ವ್ಯಕ್ತಪಡಿಸಿದ್ದ. ಆತ ಬೆಟ್ಟದಲ್ಲಿ ಮೊಬೈಲ್ ಫೋನ್ ಆನ್ ಮಾಡಿದಾಗ ಪೊಲೀಸರು ಕಿರಣ್ ಜಾಡು ಹಿಡಿದು ಬಂಧಿಸಿದ್ದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments