ಕೇಂದ್ರ ಜಿಎಸ್‌ಟಿ ಕಚೇರಿಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಕಿಲಾಡಿಗಳು ಅಧಿಕಾರಿಗಳ ಸೋಗಿನಲ್ಲಿ ಗುಟ್ಕಾ ವ್ಯಾಪಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಜಾಲವನ್ನು ಬನಶಂಕರಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಬಂಧಿತರಿಂದ ನಕಲಿ ಐಡಿ ಕಾರ್ಡ್‌ಗಳು ಹಾಗೂ 5 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳು ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಸುಲಭವಾಗಿ ಹಣ ಸಂಪಾದಿಸುವ ಹಪಾಹಪಿಗೆ ಬಿದ್ದ ಇವರು, ಜಿಎಸ್‌ಟಿ ಇಂಟಲಿಜೆನ್ಸ್ ವಿಭಾಗದ ಅಧಿಕಾರಿಗಳೆಂದು ನಕಲಿ ಐಡಿ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಈ ನಕಲಿ ಕಾರ್ಡ್ ತೋರಿಸಿ ಪೀಣ್ಯಾದ ಗುಟ್ಕಾ ವ್ಯಾಪಾರಿಯೊಬ್ಬರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದರು. ಈ ಅಕ್ರಮದ ವಿಚಾರ ಇವರು ಕೆಲಸ ಮಾಡುತ್ತಿದ್ದ ಕಚೇರಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ, ಜಿಎಸ್‌ಟಿ ಸೂಪರಿಂಟೆಂಡೆಂಟ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಬನಶಂಕರಿ ಪೊಲೀಸರು ಇಬ್ಬರನ್ನೂ ಕಂಬಿ ಹಿಂದೆ ತಳ್ಳಿದ್ದಾರೆ.


