ಬೆಂಗಳೂರು: ಬೆಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ನೆರೆಯ ರಾಜ್ಯಗಳಿಗೂ ಹಬ್ಬಿದ್ದ ಭೀಕರ ಅಂಡಾಣು ಮಾರಾಟ ದಂಧೆಯನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಭೇದಿಸಿದ್ದಾರೆ. ಅಮಾಯಕ ಮಹಿಳೆಯರಿಗೆ ಹಣದ ಆಮಿಷವೊಡ್ಡಿ, ಅವರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಜಾಲದ ಕಿಂಗ್ಪಿನ್ ಸುಲಕ್ಷಣಾ ಗಡೇಕರ್ ಸೇರಿದಂತೆ ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಜಾಲವು ಬೆಂಗಳೂರು, ತೆಲಂಗಾಣ ಮತ್ತು ಮಹಾರಾಷ್ಟ್ರದಾದ್ಯಂತ ವಿಸ್ತರಿಸಿದ್ದು, ಸುಮಾರು 40ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಅಂಡಾಣು ದಾನ ಮಾಡಿದರೆ 30,000 ರೂ. ನೀಡುವ ಆಸೆ ತೋರಿಸುತ್ತಿದ್ದ ಖದೀಮರು, ಮಹಿಳೆಯರನ್ನು ಬೆಂಗಳೂರಿಗೆ ಕರೆತಂದು ವೈದ್ಯಕೀಯ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಅಂಡಾಣು ಸಂಗ್ರಹಿಸುತ್ತಿದ್ದರು.
ಯಾವುದೇ ವೈದ್ಯಕೀಯ ಪದವಿ ಇಲ್ಲದಿದ್ದರೂ ಆರೋಪಿಗಳು ಮನೆಯಲ್ಲೇ ಸ್ಕ್ಯಾನಿಂಗ್ ನಡೆಸುತ್ತಿದ್ದರು. ದಾಳಿಯ ವೇಳೆ ಆರೋಪಿಗಳ ಮನೆಯಿಂದ 10 ಲಕ್ಷ ರೂಪಾಯಿ ಮೌಲ್ಯದ ಹಾರ್ಮೋನ್ ಇಂಜೆಕ್ಷನ್ಗಳು, ಅಕ್ರಮ ವೈದ್ಯಕೀಯ ದಾಖಲೆಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲಸ ಮುಗಿದ ಮೇಲೆ ಭರವಸೆ ನೀಡಿದ್ದ ಹಣವನ್ನು ನೀಡದೆ ವಂಚಿಸಿದಾಗ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಬೃಹತ್ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


