
ಲೋಕಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಡೆದ ಈ ಹೈ-ಡ್ರಾಮಾ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿ ಭಾಷಣಕ್ಕೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚೀನಾ ಮತ್ತು ಡೋಕ್ಲಾಮ್ ವಿಚಾರವನ್ನು ಪ್ರಸ್ತಾಪಿಸಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಪುಸ್ತಕದ ಉಲ್ಲೇಖ ಮಾಡಿದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇನ್ನೂ ಪ್ರಕಟವಾಗದ ಪುಸ್ತಕದ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ. ಇದು ಸದನದ ನಿಯಮಗಳಿಗೆ ವಿರುದ್ಧವಾದುದು ಎಂದು ರಾಜನಾಥ್ ಸಿಂಗ್ ವಾದಿಸಿದರು.ಗೃಹ ಸಚಿವ ಅಮಿತ್ ಶಾ ಅವರು ಪುಸ್ತಕದ ಅಧಿಕೃತತೆ ಬಗ್ಗೆ ಪ್ರಶ್ನಿಸಿದರೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸದನವು ನಿಯಮಗಳ ಪ್ರಕಾರ ನಡೆಯುತ್ತದೆ, ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂದು ತಿರುಗೇಟು ನೀಡಿದರು.
ಡೋಕ್ಲಾಮ್ ಪ್ರದೇಶವು ಭಾರತ, ಭೂತಾನ್ ಮತ್ತು ಚೀನಾ ದೇಶಗಳ ಗಡಿ ಸಂಧಿಸುವ ಆಯಕಟ್ಟಿನ ಸ್ಥಳವಾಗಿದೆ. 2017ರಲ್ಲಿ ಇಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ದೀರ್ಘಕಾಲದ ಬಿಕ್ಕಟ್ಟು ಉಂಟಾಗಿತ್ತು, ಇದರ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಪರವಾಗಿ ಬ್ಯಾಟ್ ಬೀಸಿ ಒತ್ತಾಯಿಸಿದರು.




