ಬೆಂಗಳೂರು: ನಗರದ ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ವ್ಯಾಪಾರಿಗಳಾದ ಸುರೇಶ್ (55) ಮತ್ತು ಮಹೇಂದ್ರ (68) ಬರ್ಬರವಾಗಿ ಹತ್ಯೆಯಾದವರು.

ಬುಧವಾರ ರಾತ್ರಿ 8.30 ರ ಸುಮಾರಿಗೆ ಕೊಲೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಂಬಾರಪೇಟೆಯ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಹರೀಶ್ ಹಾಗೂ ಆತನ ಸ್ನೇಹಿತ ಮಹೇಂದ್ರ ಹಾರ್ಡ್ವೇರ್ ಶಾಪ್ ನಡೆಸುತ್ತಿದ್ದರು. ಈ ಕಾಂಪ್ಲೆಕ್ಸ್‌ ಮಾಲೀಕತ್ವದ ವಿಚಾರದಲ್ಲಿ ಹರೀಶ್ ಹಾಗೂ ಈತನ ಸೋದರ ಸಂಬಂಧಿ ಬದ್ರಿನಾಥ್ ಎಂಬುವನಿಗೆ ವೈಮನಸ್ಸಿತ್ತು.

ಬುಧವಾರ ರಾತ್ರಿ 7.45ರ ಸುಮಾರಿಗೆ ಕಾಂಪ್ಲೆಕ್ಸ್‌ನಲ್ಲಿ ಹರೀಶ್ ಹಾಗೂ ಮಹೇಂದ್ರ ಮಾತನಾಡುತ್ತ ಕುಳಿತಿದ್ದ ವೇಳೆ ಬದ್ರಿನಾಥ್ ತೆರಳಿದ್ದು, ಮೂವರ ನಡುವೆಯೂ ಆಸ್ತಿ ವಿಚಾರಕ್ಕೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಬದ್ರಿನಾಥ್, ಚಾಕುವಿನಿಂದ ಹರೀಶ್ ಹಾಗೂ ಮಹೇಂದ್ರನಿಗೆ ಮನಬಂದಂತೆ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬೆರಳಚ್ಚು ಹಾಗೂ ಎಫ್‌ಎಸ್‌ಎಲ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಎಚ್‌.ಕೆ ಶೇಖರ್ ಖುದ್ದು ಸ್ಥಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಡಿಸಿಪಿ ಹೇಳಿಕೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗ ಡಿಸಿಪಿ ಶೇಖರ್, ”ಕುಂಬಾರಪೇಟೆಯ ಅಂಗಡಿಯಲ್ಲಿ ಜೋಡಿ ಕೊಲೆ ಆಗಿದೆ. ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಮತ್ತು ಕೊಲೆಯಾದವರು ದೂರದ ಸಂಬಂಧಿಕರು. ಆಸ್ತಿ ವಿಚಾರವಾಗಿ ಜಗಳ ನಡೆದಿರುವುದು ಪ್ರಾಥಮಿಕವಾಗಿ ಗೊತ್ತಾಗಿದೆ. ಸುರೇಶ್ ಮತ್ತು ಮಹೇಂದ್ರ ಇಬ್ಬರು ಕಿಚನ್ ಉಪಕರಣ ಮಾರಾಟ ಮಾಡುತ್ತಿದ್ದರು. ಸಂಜೆ 8ರಿಂದ 8.30ರ ನಡುವೆ ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಕೊಲೆ‌ ಮಾಡಲಾಗಿದೆ” ಎಂದು ತಿಳಿಸಿದರು. ಪೊಲೀಸರು ಮೃತದೇಹಗಳನ್ನು ಸ್ಥಳಾಂತರ ಮಾಡಿದ್ದಾರೆ. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights