ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳ ವಿರುದ್ಧ ಗವರ್ನರ್ ಗೆ ದೂರುಗಳ ಸರಮಾಲೆ ಮುಂದುವರೆದಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ವಿರುದ್ಧ ಗವರ್ನರ್ ಗೆ ದೂರು ನೀಡಿದ್ದಾರೆ. ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಸೃಜನ ಪಕ್ಷಪಾತ ಮತ್ತು ಅಧಿಕಾರಶಾಹಿ ಅಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕುತ್ತಿಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದರು ದೂರಿಗೆ ಸ್ಪಂದಿಸದೆ ಭ್ರಷ್ಟಾಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ, ಇವರ ವಿರುದ್ಧ ಕ್ರಮ ಕೈಗೊಂಡು ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಬೆಳವಂಗಲ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150 ರಲ್ಲಿ ಹಂಗಾಮಿ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ತಾತ್ಕಾಲಿಕ ಮಂಜೂರಾತಿ ದಾಖಲುಗಳನ್ನು ದುರುಪಯೋಗಪಡಿಸಿಕೊಂಡು ಪಲ್ವಿತ್ ಡೆವಲಪರ್ಸ್ ಅವರಿಗೆ ಭೂ ಪರಭಾರೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಎಸಿ ದುರ್ಗಾಶ್ರೀ ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ಖಾತೆ ಮಾಡಿಕೊಟ್ಟಿದ್ದಾರೆ. ಸದರಿ ಸರ್ವೆ ನಂಬರ್ ನ ಭೂಮಿಗೆ ಪೋಡಿ ಮತ್ತು ಹದ್ದುಬಸ್ತು ಆಗಿರುವುದಿಲ್ಲ. ಸದರಿ ಭೂಮಿಯನ್ನು ಜಿಪಿಎ ಪತ್ರದ ಮೂಲಕ ಮಾರಾಟ ಮಾಡಿರುವುದು ಹಾಗೂ ಖಾತೆ ಮಾಡಿಕೊಟ್ಟಿರುವುದು ಕಾನೂನುಬಾಹಿರವಾಗಿದೆ. ಡೆವಲಪರ್ ಜೊತೆ ಶಾಮಿಲಾಗಿ ಅಧಿಕಾರಿಗಳು ಕೃತ್ಯ ನಡೆಸಿದ್ದಾರೆ. …
ಈ ಡೆವಲಪರ್ ಹಿಂದೆ ಹಲವು ಬೇನಾಮಿ ಪ್ರಭಾವಿಗಳಿರುವ ಅನುಮಾನವಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಮೂಡಿಸಿದೆ. ಸರ್ಕಾರದಿಂದ ಪೂರ್ವ ಅನುಮತಿ ಪಡೆಯದೆ ಆಗಿರುವ ಈ ಪ್ರಕರಣದಲ್ಲಿ ಸಚಿವರ ಪರೋಕ್ಷ ಹಸ್ತಕ್ಷೇಪ ಇರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಸಚಿವರ ವಿರುದ್ಧ ತನಿಖೆಗೆ ನಿರ್ದೇಶನ ನೀಡಬೇಕೆಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.