ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳೇ ಸಚಿವರಿಗೆ ಲಂಚವನ್ನು ತಲುಪಿಸುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. ಕೂಡಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಡಾ.ಮುಖ್ಯಮಂತ್ರಿ ಚಂದ್ರು, ಅಬಕಾರಿ ಇಲಾಖೆಯಲ್ಲಿ ಅವ್ಯವಹಾರ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಬಿಜೆಪಿ ಅವಧಿಯಲ್ಲೂ ಅಬಕಾರಿ ಇಲಾಖೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಬಕಾರಿ ಇಲಾಖೆಯಲ್ಲಿ ಈವರೆಗೆ ಸುಮಾರು 900 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಗಳು ಕೇಳಿ ಬಂದಿದೆ. ಸಚಿವರಿಗೆ ಪ್ರತಿ ತಿಂಗಳು ಮಾಮೂಲಿ ಕೊಡಬೇಕು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳೇ ಮದ್ಯದಂಗಡಿಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಮದ್ಯ ಮಾರಾಟಗಾರರ ಸಂಘವೇ ಸಚಿವರ ವಿರುದ್ಧ ಆರೋಪ ಮಾಡಿದೆ ಎಂದರೆ, ಇಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದು ಸ್ಪಷ್ಟವಾಗಿದೆ ಕೂಡಲೇ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಕೂಡಲೇ ಸಚಿವ ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ವಿಮುಕ್ತಿಗೊಳಿಸಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆಗೆ ಆದೇಶ ಕೊಡಬೇಕು. ಈ ವಿಚಾರದಲ್ಲಿ ನೀವು ಮೌನವಾಗಿದ್ದರೆ ಈ ಭ್ರಷ್ಟಾಚಾರಕ್ಕೆ ನಿಮ್ಮ ಒಪ್ಪಿಗೆ ಕೂಡ ಇದೆ ಎನ್ನುವ ಕೆಟ್ಟ ಸಂದೇಶ ರವಾನಿಸದಂತಾಗುತ್ತದೆ. ಈ ಕೂಡಲೇ ಕ್ರಮ ತೆಗೆದುಕೊಂಡು ತಾವು ಭ್ರಷ್ಟಾಚಾರವನ್ನು ಸಹಿಸಲ್ಲ ಎನ್ನುವ ಸಂದೇಶ ಕೊಡಬೇಕಿದೆ ಎಂದು ಒತ್ತಾಯಿಸಿದ್ದಾರೆ.