ದೇಶ/ವಿದೇಶರಾಜಕೀಯಸುದ್ದಿ

ಲೋಕಸಭೆಯಲ್ಲಿ ‘ಪುಸ್ತಕ’ ಸಂಘರ್ಷ: ಪ್ರಕಟವಾಗದ ಕೃತಿಯ ಉಲ್ಲೇಖಿಸಿದ ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಭಾರಿ ವಾಕ್ಸಮರ ನಡೆಯಿತು. ಚೀನಾ ಮತ್ತು ಡೋಕ್ಲಾಮ್ ವಿಚಾರವಾಗಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಪ್ರಕಟವಾಗದ ಪುಸ್ತಕವೊಂದರ ಉಲ್ಲೇಖ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಯಿತು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಚೀನಾ ಮತ್ತು ಡೋಕ್ಲಾಮ್ ಬಿಕ್ಕಟ್ಟಿನ ಕುರಿತು ಬರೆದಿದ್ದಾರೆನ್ನಲಾದ ಪುಸ್ತಕದ ಅಂಶಗಳನ್ನು ಪ್ರಸ್ತಾಪಿಸಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ರಾಹುಲ್ ಉಲ್ಲೇಖಿಸುತ್ತಿರುವ ಪುಸ್ತಕ ಇನ್ನೂ ಪ್ರಕಟವೇ ಆಗಿಲ್ಲ. ಅಸ್ತಿತ್ವದಲ್ಲಿಲ್ಲದ ಪುಸ್ತಕದ ಬಗ್ಗೆ ಮಾತನಾಡಿ ಸದನವನ್ನು ದಾರಿ ತಪ್ಪಿಸಬೇಡಿ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವರು ಮಾತನಾಡಿ, “ಸದನದಲ್ಲಿ ಮಾತನಾಡುವಾಗ ಜವಾಬ್ದಾರಿಯುತವಾಗಿರಬೇಕು. ಪುಸ್ತಕ ಪ್ರಕಟವಾಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ” ಎಂದು ಸವಾಲು ಹಾಕಿದರು.
ಲೋಕಸಭಾ ಸ್ಪೀಕರ್ ಅವರು ರಾಹುಲ್ ಗಾಂಧಿಯವರ ಮಾತಿಗೆ ಅಡ್ಡಿಪಡಿಸಿ, “ಸದನದ ನಿಯಮಾವಳಿಗಳ ಪ್ರಕಾರ, ಪ್ರಕಟವಾಗದ ಅಥವಾ ಅಧಿಕೃತವಲ್ಲದ ದಾಖಲೆಗಳನ್ನು ಚರ್ಚಿಸಲು ಅವಕಾಶವಿಲ್ಲ” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಂಸದೀಯ ವ್ಯವಹಾರಗಳ ಸಚಿವರು ಸದನವು ಸಂವಿಧಾನ ಮತ್ತು ನಿಯಮಗಳ ಮೇಲೆ ನಡೆಯುತ್ತದೆಯೇ ಹೊರತು ಗಾಳಿ ಸುದ್ದಿಗಳ ಮೇಲಲ್ಲ” ಎಂದರು.

ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಪ್ರತಿರೋಧ:
ತಮ್ಮ ನಿಲುವನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, “ಬಿಜೆಪಿ ಸರ್ಕಾರವು ಸತ್ಯಕ್ಕೆ ಹೆದರುತ್ತಿದೆ. ಅದಕ್ಕಾಗಿಯೇ ನರವಾಣೆ ಅವರ ಪುಸ್ತಕ ಬಿಡುಗಡೆಯನ್ನು ತಡೆಯುತ್ತಿದೆ. ನಿಮಗೆ ಭಯವಿಲ್ಲದಿದ್ದರೆ ನನಗೆ ಓದಲು ಅವಕಾಶ ನೀಡಿ” ಎಂದು ವಾಗ್ದಾಳಿ ನಡೆಸಿದರು. ಇವರಿಗೆ ಸಾಥ್ ನೀಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ಚೀನಾ ವಿಷಯವು ಅತ್ಯಂತ ಸೂಕ್ಷ್ಮವಾಗಿದ್ದು, ಈ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.

Comments (0)

Your email address will not be published. Required fields are marked *

Back to top button