
ರಾಜ್ಯಸಭೆಯಲ್ಲಿ ಸೋಮವಾರ ನಡೆದ ರಾಷ್ಟ್ರಪತಿಗಳ ಭಾಷಣದ ಚರ್ಚೆಯ ವೇಳೆ ಅನಿರೀಕ್ಷಿತ ಘಟನೆ ನಡೆದಿದ್ದು ಬಿಜೆಪಿ ಸಂಸದ ಸಿ. ಸದಾನಂದನ್ ಮಾಸ್ಟರ್ ಮೂರು ದಶಕಗಳ ಹಿಂದೆ ಕೇರಳದಲ್ಲಿ ತಾವು ಎದುರಿಸಿದ ರಾಜಕೀಯ ಹಿಂಸಾಚಾರದ ಕಹಿ ನೆನಪುಗಳನ್ನು ಬಿಚ್ಚಿಡುತ್ತಾ, ತಮ್ಮ ಕೃತಕ ಕಾಲುಗಳನ್ನು ಪ್ರದರ್ಶಿಸಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಯಿತು.
31 ವರ್ಷಗಳ ಹಿಂದೆ ಸಿಪಿಐಎಂ ಕಾರ್ಯಕರ್ತರು ನಡೆಸಿದ ಭೀಕರ ದಾಳಿಯಲ್ಲಿ ತಮ್ಮ ಎರಡೂ ಕಾಲುಗಳನ್ನು ಸದಾನಂದನ್ ಮಾಸ್ಟರ್ ಕಳೆದುಕೊಂಡಿದ್ದರು. ಆ ಘಟನೆಯನ್ನು ನೆನಪಿಸಿಕೊಂಡ ಅವರು, “ರಾಷ್ಟ್ರ ಮತ್ತು ಜನರ ಮುಂದೆ ಪ್ರಜಾಪ್ರಭುತ್ವದ ಅಸಲಿ ಮುಖವನ್ನು ತೋರಿಸಲು ಬಯಸುತ್ತೇನೆ. ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಬಗ್ಗೆ ಮಾತನಾಡುವವರು ಅಂದು ನನ್ನ ಮೇಲೆ ದಾಳಿ ಮಾಡಿ, ಕಾಲುಗಳನ್ನು ಕತ್ತರಿಸಿ ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿದ್ದರು, ಆ ದಿನ ಅನುಭವಿಸಿದ ದೈಹಿಕ ಹಿಂಸೆಯಿಂದಾಗಿ ತನಗೆ ಇಂದಿಗೂ ನಿಂತು ಭಾಷಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೃತಕ ಕಾಲುಗಳನ್ನು ಮೇಜಿನ ಮೇಲೆ ಇಟ್ಟು ಪ್ರದರ್ಶಿಸಿದರು.
ತಕ್ಷಣವೇ ವಿರೋಧ ಪಕ್ಷದ ಸದಸ್ಯರು, ವಿಶೇಷವಾಗಿ ಸಿಪಿಐಎಂ ಸಂಸದ ಜಾನ್ ಬ್ರಿಟ್ಟಾಸ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದ ನಿಯಮಗಳ ಪ್ರಕಾರ ಯಾವುದೇ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ನಿಷೇಧವಿದೆ ಎಂದು ವಾದಿಸಿದರು. ಇದಕ್ಕೆ ತಿರುಗೇಟು ನೀಡಿದ ಸದಾನಂದನ್ ಮಾಸ್ಟರ್, ನೀವು ಯಾವಾಗಲೂ ವಾಕ್ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಬಗ್ಗೆ ಧರ್ಮೋಪದೇಶ ನೀಡುತ್ತೀರಿ, ಆದರೆ ನಿಮ್ಮ ಬದ್ಧತೆ ಇರುವುದು ಹಿಂಸಾಚಾರದ ಮೇಲೆ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಮಧ್ಯಪ್ರವೇಶಿಸಿ, ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸುವಾಗಲೂ ಇದೇ ನಿಯಮ ನೆನಪಿಟ್ಟುಕೊಳ್ಳಬೇಕು ಎಂದು ವಿರೋಧ ಪಕ್ಷದವರಿಗೆ ಸೂಚಿಸಿದರು.
ಸದಾನಂದನ್ ಮಾಸ್ಟರ್ ಮೂಲತಃ ಕಮ್ಯುನಿಸ್ಟ್ ಕುಟುಂಬದಿಂದ ಬಂದಿದ್ದ ಅವರು ಎಸ್ಎಫ್ಐ (SFI) ಸಕ್ರಿಯ ಸದಸ್ಯರಾಗಿದ್ದರು. ಆದರೆ ನಂತರ ಆರೆಸ್ಸೆಸ್ ಸಿದ್ಧಾಂತಕ್ಕೆ ಆಕರ್ಷಿತರಾಗಿ ಪಕ್ಷ ಬದಲಿಸಿದ್ದರು. ಈ ಸೈದ್ಧಾಂತಿಕ ಬದಲಾವಣೆಯನ್ನು ಸಹಿಸದ ಸಿಪಿಐಎಂ ಕಾರ್ಯಕರ್ತರು, ಅವರನ್ನು ಮರಳಿ ಪಕ್ಷಕ್ಕೆ ತರಲು ಪ್ರಯತ್ನಿಸಿ ವಿಫಲರಾದಾಗ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು ಎಂದು ಅವರು ವಿವರಿಸಿದರು.




