ಕಝಾನ್: ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು. ಐದು ವರ್ಷಗಳ ಬಳಿಕ ಎರಡೂ ದೇಶಗಳ ನಡುವೆ ನಡೆದ ಈ ಮೊದಲ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಗಡಿಯಲ್ಲಿ ಶಾಂತಿ, ಸ್ಥಿರತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದು ಸಲಹೆ ಮಾಡಿದರು.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಯುದ್ಧದ ವಿರುದ್ಧ ಮಾತನಾಡಿದ್ದು, ‘ಭಾರತವು ಯುದ್ಧವನ್ನು ಬೆಂಬಲಿಸುವುದಿಲ್ಲ. ನಾವು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಂಘರ್ಷ ಬಗೆಹರಿಸಿಕೊಳ್ಳುವುದನ್ನು ಬೆಂಬಲಿಸುತ್ತೇವೆ’ ಎಂದು ನೇರವಾಗಿ ಹೇಳಿದ್ದಾರೆ. ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದಲ್ಲಿ ಬುಧವಾರ ಮಾತನಾಡಿದ ಅವರು ರಷ್ಯಾ-ಉಕ್ರೇನ್ ಸಂಘರ್ಷವನ್ನು ಬಗ್ಗೆನಿರ್ಣಯ ಅಂಗೀಕರಿಸಬೇಕು ಎಂದು ಪರೋಶ ಸಂದೇಶ ರವಾನಿಸಿದರು. ‘ಯುದ್ಧ, ಆರ್ಥಿಕ ಅಸ್ಥಿರತೆ, ಹವಾಮಾನ ಬದಲಾವಣೆ ಹಾಗೂ ಭಯೋತ್ಪಾದನೆಯ ವಿಷಯದಲ್ಲಿ ಬ್ರಿಕ್ ರಚನಾತ್ಮಕ ಪಾತ್ರ ನಿಭಾಯಿಸುವಮೂಲಕ ಜಗತ್ತನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡುಹೋಗಲು ಅವಕಾಶವಿದೆ. ನಾವು ಮಾತುಕತೆ ಹಾಗೂ ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ. ಯುದ್ಧವನ್ನು ಬೆಂಬಲಿಸುವುದಿಲ್ಲ, ಎಲ್ಲಾ ದೇಶಗಳೂ ಒಗ್ಗಟ್ಟಿನಿಂದ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಿದಂತೆ ಬೇರೆ ಸವಾಲುಗಳನ್ನೂ ಎದುರಿಸಿ ಗೆಲ್ಲಲು ಸಾಧ್ಯವಿದೆ’ ಎಂದು ಹೇಳಿದರು. ಮೋದಿ ಮಾತನಾಡುವಾಗ ವೇದಿಕೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲೀಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದ್ದರು.
ಕಝಾನ್: ಲಡಾಖ್ ವಲಯದಲ್ಲಿನ ಸಂಘ ರ್ಷದ ವಾತಾವರಣ ತಿಳಿಗೊಳಿಸುವ ಸಲುವಾಗಿ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ. ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ದೇಶಗಳ ಶೃಂಗ ಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಬುಧವಾರ ನಡೆದ ಮಹತ್ವದ ದ್ವಿಪಕ್ಷೀಯ ಮಾತುಕತೆ ವೇಳೆ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಬುಧವಾರದ ಮಾತುಕತೆ ವೇಳೆ ಉಭಯ ನಾಯಕರು, ಎರಡೂ ದೇಶಗಳ ನಡುವೆ ಶಾಂತಿ ಯುತ ಹಾಗೂ ಸ್ಥಿರ ಸಂಬಂಧ ಸ್ಥಾಪಿಸುವ ಕುರಿತು ಸಮ್ಮತಿ ವೈಕ್ತಪಡಿಸಿದ್ದಾರೆ. ಜೊತೆಗೆ ಪ್ರಬುದ್ದತೆ, ಪರಸ್ಪರರ ಗೌರವಿಸುವ ಮೂಲಕ ಭಾರತ ಮತ್ತು ಚೀನಾ ಶಾಂತಿಯುತ, ಸ್ಥಿರ ಸಂಬಂಧವನ್ನು ಹೊಂದಬಹುದು ಎಂಬ ನಿಲುವನ್ನು ಎರಡೂ ದೇಶ ವ್ಯಕ್ತಪಡಿಸಿವೆ. 2020ರಲ್ಲಿ ಲಡಾಖ್ ನಲ್ಲಿ ಉಭಯ ದೇಶಗಳ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಇದು ಭಾರತ ಮತ್ತು ಚೀನಾ ನಡುವೆ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ಎಂಬುದು ಗಮನಾರ್ಹ. ” ಮತ್ತಷ್ಟು ಮಾತುಕತೆ:ಈ ವೇಳೆ ಗಡಿಯಲ್ಲಿ ಏರ್ಪಟ್ಟಿರುವ ಸಂಘರ್ಷದ ಸನ್ನಿವೇಶದ ಕುರಿತು ಮೋದಿ- ಜಿನ್ ಪಿಂಗ್ ಚರ್ಚೆ ನಡೆಸಿದ್ದು, ಇದನ್ನು ಬಗೆಹರಿಸುವಲ್ಲಿ ವಿಶೇಷ ಪ್ರತಿನಿಧಿಗಳು ಮಹತ್ವದ ಪಾತ್ರ ವಹಿಸಲಿದ್ದು, ಅವರ ಸಭೆಗೆ ದಿನಾಂಕ ನಿಗದಿಪಡಿಸಲು ಒಪ್ಪಿದ್ದಾರೆ. ನಂಬಿಕೆ, ಗೌರವ: ದ್ವಿಪಕ್ಷೀಯ ಮಾತುಕತೆ ವೇಳೆ, ಭಾರತ-ಚೀನಾ ಸಂಬಂಧವು, ನಮ್ಮ ದೇಶದ ಜನತೆಗೆ ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅಗತ್ಯ, ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಮೂಲಕ ಇದನ್ನು ಸಾಧಿಸಲು ಸಾಧ್ಯ.
4 ವರ್ಷಗಳ ಗಡಿ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ ಒಮ್ಮತದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿರಬೇಕು. ಪರಸ್ಪರ ನಂಬಿಕೆ, ಗೌರವ ಹಾಗೂ ಸೂಕ್ಷ್ಮತೆ ದ್ವಿಪಕ್ಷೀಯ ಸಂಬಂಧದ ಆಧಾರವಾಗಿರಬೇಕು. ಈ ಕುರಿತ ಮಾತುಕತೆಗಳನ್ನು ಮುಕ್ತ ಮನಸ್ಸಿನಿಂದ ನಡೆಸುತ್ತೇವೆ ಎಂದು ನಂಬಿದ್ದೇನೆ ಎಂದು ಸಭೆಯಲ್ಲಿ ಮೋದಿ ಮಾತನಾಡಿದ್ದಾರೆ.