ರಾಜ್ಯಸುದ್ದಿ

ಆರತಕ್ಷತೆ ದಿನ ವರನಿಗೆ ಚೂರಿ ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್: ವಧುವೇ ಅಸಲಿ ಕಿಲಾಡಿ

ಕೊಳ್ಳೇಗಾಲ: ಮದುವೆ ಮನೆಯಲ್ಲಿ ಅಮಾಯಕಿಯಂತೆ ನಟಿಸಿ, ಕಣ್ಣೀರು ಹಾಕುತ್ತಾ ಎಲ್ಲರ ಮರುಕ ಗಿಟ್ಟಿಸಿದ್ದ ವಧುವಿನ ಅಸಲಿ ಮುಖವಾಡ ಕಳಚಿದೆ. ಅರತಕ್ಷತೆ ದಿನವೇ ವರನಿಗೆ ಚೂರಿ ಇರಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದ್ದು, ಈ ಭೀಕರ ಕೃತ್ಯದ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಸ್ವತಃ ವಧು ನಯನಾ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಏನಿದು ಪ್ರಕರಣ?

ಕಳೆದ ಜನವರಿ 27ರಂದು ವರ ರವೀಶ್ ತನ್ನ ಆರತಕ್ಷತೆ ಸಮಾರಂಭಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ಮಾರ್ಗಮಧ್ಯೆ ದುಷ್ಕರ್ಮಿಯೊಬ್ಬ ಕಾರು ಅಡ್ಡಗಟ್ಟಿ ಚೂರಿ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವೀಶ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರು. ಈ ಘಟನೆ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದ ತಂಡ ತಾಂತ್ರಿಕ ಸಾಕ್ಷ್ಯಗಳನ್ನು ಜಾಲಾಡಿದಾಗ ಪೊಲೀಸರಿಗೇ ದಿಗಿಲು ಕಾದಿತ್ತು. ವಧು ನಯನಾ ತಮಟೆ ವಾದಕ ದರ್ಶನ್ ಎಂಬಾತನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ರವೀಶ್ ಜೊತೆ ಮದುವೆಗೆ ಒಪ್ಪಿದ್ದಳು.

ಒಂದೆಡೆ ವರ ರವೀಶ್ ಜೊತೆ ಪ್ರೀತಿಯ ನಾಟಕವಾಡುತ್ತಿದ್ದ ನಯನಾ, ಇನ್ನೊಂದೆಡೆ ಪ್ರಿಯತಮನ ಮೂಲಕ ರವೀಶ್‌ಗೆ ಬೆದರಿಕೆ ಕರೆಗಳನ್ನು ಮಾಡಿಸುತ್ತಿದ್ದಳು. ಚೂರಿ ಇರಿತದ ಬಳಿಕ ರವೀಶ್ ಮದುವೆ ಬೇಡ ಎಂದು ನಿರ್ಧರಿಸಿದ್ದರು. ಈ ವೇಳೆ ಆಸ್ಪತ್ರೆಗೆ ಓಡಿಬಂದಿದ್ದ ನಯನಾ, ನನ್ನನ್ನು ಬಿಟ್ಟು ಹೋಗಬೇಡಿ, ಮದುವೆ ಕ್ಯಾನ್ಸಲ್ ಮಾಡಬೇಡಿ ಎಂದು ಕಣ್ಣೀರು ಸುರಿಸುತ್ತಾ ದೊಡ್ಡ ಹೈಡ್ರಾಮಾ ಮಾಡಿದ್ದಳು. ಆದರೆ ಪೊಲೀಸರು ಆಕೆಯ ಕಾಲ್ ರೆಕಾರ್ಡ್ (CDR) ಪರಿಶೀಲಿಸಿದಾಗ, ಘಟನೆ ನಡೆದ ಬಳಿಕವೂ ಆಕೆ ಪ್ರಿಯತಮ ದರ್ಶನ್ ಜೊತೆ ನಿರಂತರ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ.

ಸದ್ಯ ಪೊಲೀಸರು ವಧು ನಯನಾ, ಆಕೆಯ ಪ್ರಿಯತಮ ದರ್ಶನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮದುವೆ ಮಂಟಪ ಏರಬೇಕಿದ್ದ ವಧು ಈಗ ಪ್ರಿಯತಮನ ಜೊತೆ ಜೈಲು ಕಂಬಿ ಎಣಿಸುವಂತಾಗಿದೆ.

Comments (0)

Your email address will not be published. Required fields are marked *

Back to top button