ಬೆಂಗಳೂರು: ನಗರದಲ್ಲಿ ನಾಯಿ ಮಾಂಸ ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದಕೂಡಲೇ ಪೊಲೀಸರು ಹಾಗೂ ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಕ್ಸ್‌ನಲ್ಲಿ ತರಿಸಲಾಗಿದ್ದ ಮಾಂಸವನ್ನ ಜಪ್ತಿ ಮಾಡಿದ್ದು, ಅಂಗಾಂಗ ಮಾದರಿಗಳನ್ನ ಹೈದರಾಬಾದ್ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.
ಆಹಾರ ಸುರಕ್ಷತೆ ಅಧಿಕಾರಿಗಳು ಹೇಳಿದ್ದೇನು?
ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ ಮಾತನಾಡಿ, ನಾವು ಒಟ್ಟು ನಾಲ್ಕು ಬಾಕ್ಸ್ ಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್ ಆಗಿ ಪಡೆದಿದ್ದೇವೆ. ಇದನ್ನು ವಿಸಿಕ್ಸ್ ಎನ್ನುವ ಲ್ಯಾಬ್‌ಗೆ ರವಾನಿಸಿ ಪರೀಕ್ಷಿಸಲಾಗುತ್ತೆ. ಇದರ ವರದಿ ಬರೋದಕ್ಕೆ 14 ದಿನಗಳ ಕಾಲಾವಕಾಶ ಬೇಕು. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ. ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್ ನಲ್ಲಿ ಗೊತ್ತಾಗುತ್ತೆ. ಒಂದು ವೇಳೆ ಇದು ದೂರುದಾರರ ದೂರಿನಂತೆ ನಾಯಿ ಮಾಂಸ ಆಗಿದ್ದರೇ ಮಾಲೀಕನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಹೇಳಿದ್ದಾರೆ.
ಬಳಿಕ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು, ಸದ್ಯಕ್ಕೆ ಬೆಂಗಳೂರಿನಲ್ಲಿ ಮಾಂಸ ಯಾವ ಪ್ರಾಣಿದು ಅಂತ ಪತ್ತೆ ಮಾಡೋಕೆ ಲ್ಯಾಬ್ ಇಲ್ಲ. ಆದಕಾರಣ ಕುರಿ ಮಾಂಸನಾ, ಬೇರೆ ಮಾಂಸನಾ? ಪತ್ತೆ ಮಾಡಲು ಹೈದರಾಬಾದ್‌ಗೆ ಮಾಂಸದ ಮಾದರಿ ಸಂಗ್ರಹವನ್ನ ರವಾನೆ ಮಾಡಲಾಗುತ್ತದೆ. ಕನಿಷ್ಠ 8 ರಿಂದ 10 ದಿನದ ಬಳಿಕ ಮಾಂಸ. ಯಾವ ಪ್ರಾಣಿಯದ್ದು ಅಂತ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಯಾವ ಪ್ರಾಣಿಯದ್ದು ಮಾಂಸ ಅಂತ ಹೇಗೆ ಗೊತ್ತಾಗಲಿದೆ?
* ಮಾಂಸದ ಪೀಸ್‌ಗಳಿಗೆ ಕೆಮಿಕಲ್ ಹಾಕಿದಾಗ ಕಲರ್ ಬರುತ್ತದೆ.
* ಕುರಿ ಮಾಂಸ, ಮೇಕೆ ಮಾಂಸ ಮತ್ತು ನಾಯಿ ಮಾಂಸ ಆದರೆ ಬೇರೆ ಬೇರೆ ಕಲರ್ ಬರಲಿದೆ.
* ಕಲರ್ ಮುಖಾಂತರ ಯಾವ ಪ್ರಾಣಿಯ ಮಾಂಸ ಅಂತ ತಜ್ಞರು ಪತ್ತೆಮಾಡುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡ ಆರೋಪಿದ್ದರು. ಶುಕ್ರವಾರ ರಾತ್ರಿ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಭಾರೀ ಹೈಡ್ರಾಮ ಸೃಷ್ಟಿಸಿದ್ದರು. ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪೊಲೀಸರು ಪುನೀತ್‌ರ ಕೆರೆಹಳ್ಳಿಯನ್ನ ವಶಕ್ಕೆ ಪಡೆದರು.