ದಾವಣಗೆರೆ: ಊರಲ್ಲಿ ಗ್ರಾಮ ದೇವತೆಯ ಜಾತ್ರೆಯೆಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಕಿರಿಕ್ ತೆಗೆದಿದ್ದ. ಗಲಾಟೆಯು ವಿಪರೀತಕ್ಕೆ ಹೋಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮ ದೇವತೆಯ ಜಾತ್ರೆಯ ದಿನದಂದು ಮನೆಗೆ ಬಂಧು ಬಾಂಧವರ ಆಗಮಿಸಿದ್ದರು. ಹಬ್ಬದ ದಿನವೂ ಕುಡಿದು ಬಂದಿದ್ದಕ್ಕೆ ಅರ್ಪಿತಾ ಸಿಟ್ಟಾಗಿದ್ದಳು. ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಹನಮಂತ (28) ಪತ್ನಿ ಅರ್ಪಿತಾಳೊಂದಿಗೆ (24) ಜಗಳಕ್ಕೆ ನಿಂತಿದ್ದ.
ಕುಡಿದ ಅಮಲಿನಲ್ಲಿ ಹನಮಂತ ಪತ್ನಿ ಅರ್ಪಿತಾಳಿಗೆ ಹೊಡೆದಿದ್ದ. ಹೊಡೆದ ರಭಸಕ್ಕೆ ಕಿವಿಯಲ್ಲಿ ರಕ್ತ ಬಂದಿದ್ದು, ಕ್ಷಣಾರ್ಧದಲ್ಲೇ ಅರ್ಪಿತಾ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.