ಹಾಸನ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಕರ್ತವ್ಯಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಬೆಳ್ಳಂಬೆಳಗ್ಗೆ ಆರಂಭವಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಕಂಡು ಅಸಮಾಧಾನಗೊಂಡ ಸಚಿವರು, ಕಚೇರಿಯಲ್ಲಿ ಇರದೆ ಜನಸಾಮಾನ್ಯರನ್ನು ಅಲೆದಾಡಿಸುತ್ತಿರುವ ಅಧಿಕಾರಿಗಳಿಗೆ ಸರಿಯಾಗಿಯೇ ಕಿವಿ ಹಿಂಡಿದ್ದಾರೆ.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಳ್ಳಾಟವಾಡುವುದನ್ನು ಬಿಟ್ಟು, ನಿಗದಿತ ಸಮಯದಲ್ಲಿ ಜನರಿಗೆ ಲಭ್ಯವಿರಬೇಕು ಮತ್ತು ಯಾವುದೇ ಕೆಲಸದ ಬಗ್ಗೆ ಜನಸಾಮಾನ್ಯರಿಗೆ “ಆಗುತ್ತೋ ಅಥವಾ ಆಗಲ್ವೋ” ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು. ಕಂದಾಯ ಇಲಾಖೆಯ ಪ್ರಗತಿಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಜನರಿಗೆ ಸತಾಯಿಸುವ ಧೋರಣೆ ಮುಂದುವರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


