ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಅಬ್ಬರಕ್ಕೆ ಇಸ್ಲಾಮಾಬಾದ್ ಬೆಚ್ಚಿಬಿದ್ದಿತ್ತು ಮತ್ತು ಅಣುಬಾಂಬ್ ಸ್ಫೋಟದ ಭೀತಿಯಲ್ಲಿ ಪಾಕಿಸ್ತಾನ ನಡುಗುತ್ತಿತ್ತು ಎಂದು ಟ್ರಂಪ್ ಬಣ್ಣಿಸಿದ್ದಾರೆ. “ನಾನು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧಿಕಾರದಲ್ಲಿ ಇರುತ್ತಿರಲಿಲ್ಲ ಮತ್ತು ಅವರ ಕಥೆ ಮುಗಿದುಹೋಗುತ್ತಿತ್ತು” ಎಂದು ಹೇಳಿಕೊಂಡಿರುವ ಟ್ರಂಪ್, ಉಭಯ ದೇಶಗಳ ಮೇಲೆ 200% ಸುಂಕ ಹೇರುವ ಬೆದರಿಕೆ ಹಾಕಿದ್ದರಿಂದಲೇ ಯುದ್ಧ ನಿಂತಿತು ಎಂದು ಪ್ರತಿಪಾದಿಸಿದ್ದಾರೆ.
ಯುದ್ಧ ನಿಲ್ಲಿಸಿದ್ದಕ್ಕಾಗಿ ಶೆಹಬಾಜ್ ಷರೀಫ್ ತಮಗೆ ಧನ್ಯವಾದ ತಿಳಿಸಿ, ಸುಮಾರು 3.5 ಕೋಟಿ ಜನರ ಪ್ರಾಣ ಉಳಿಸಿದಿರಿ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದರು ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಭಾರತ ಸರ್ಕಾರವು ಟ್ರಂಪ್ ಅವರ ಈ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಗಡಿ ಬಿಕ್ಕಟ್ಟು ಶಮನವಾಗಲು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ನಡೆದಿಲ್ಲ ಮತ್ತು ಉಭಯ ದೇಶಗಳ ಸೇನಾಧಿಕಾರಿಗಳ ನೇರ ಮಾತುಕತೆಯಿಂದಲೇ ಕದನ ವಿರಾಮ ಏರ್ಪಟ್ಟಿದೆ ಎಂದು ಖಡಕ್ ಸ್ಪಷ್ಟನೆ ನೀಡಿದೆ.


