Wednesday, February 25, 2026
28.8 C
Bengaluru
Google search engine
LIVE
ಮನೆ#Exclusive NewsTop Newsಕಾಫಿ ನಾಡಲ್ಲಿ ಕಾಡಾನೆ ಅಟ್ಟಹಾಸ! 12 ಗ್ರಾಮಗಳಲ್ಲಿ ನಿಷೇಧಾಜ್ಞೆ

ಕಾಫಿ ನಾಡಲ್ಲಿ ಕಾಡಾನೆ ಅಟ್ಟಹಾಸ! 12 ಗ್ರಾಮಗಳಲ್ಲಿ ನಿಷೇಧಾಜ್ಞೆ

ಚಿಕ್ಕಮಗಳೂರು: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಅಂಚಿನ ಗ್ರಾಮಗಳಲ್ಲಿ ಅತೀವ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ಒಂದು ವಾರದ ಅಂತರದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರು ಕಾರ್ಮಿಕರು ಆನೆ ದಾಳಿಗೆ ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ 12 ಗ್ರಾಮಗಳಲ್ಲಿ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

ಹುಣಸೆಹಳ್ಳಿ ಗ್ರಾಮದಲ್ಲಿ ಕಾಫಿ ತೋಟದ ಕಾರ್ಮಿಕರಾದ ಯಲ್ಲಪ್ಪ ಮತ್ತು ಹೊಸಪೇಟೆ ಮೂಲದ ಬೋರಮ್ಮ ಅವರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ಘಟನೆಗಳ ನಂತರ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಒಂದು ಕಿಲ್ಲರ್ ಸಲಗವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಇನ್ನೂ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿರುವುದರಿಂದ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರವನ್ನು ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ ಸೇರಿದಂತೆ ಒಟ್ಟು 12 ಸೂಕ್ಷ್ಮ ಗ್ರಾಮಗಳಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿದ್ದು, ಅರಣ್ಯ ಇಲಾಖೆಯು ಶ್ವಾನ ದಳದ ಸಹಾಯದೊಂದಿಗೆ ಆನೆಗಳ ಚಲನವಲನಗಳ ಮೇಲೆ ಹದ್ದಿನಕಣ್ಣು ಇಟ್ಟಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವವರು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಬೇಕು ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಗುಂಪುಗಳಲ್ಲಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಮತ್ತು ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸಬಾರದು ಎಂದು ಮನವಿ ಮಾಡಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments