ಕೊಪ್ಪಳ: ಜಿಲ್ಲೆಯ ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ವಸತಿ ಶಾಲೆಗಳ ಮೇಲ್ವಿಚಾರಣೆ ಮತ್ತು ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.ಶಿಕ್ಷಣ ಮತ್ತು ಸುರಕ್ಷತೆಯ ಭರವಸೆ ನೀಡುವ ಇಂತಹ ಸರ್ಕಾರಿ ಸಂಸ್ಥೆಗಳಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತಿದೆ.
ಬಾಲಕಿಗೆ ಮದುವೆಯ ಆಮಿಷವೊಡ್ಡಿ, ಬೆದರಿಕೆ ಹಾಕಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಈಗಾಗಲೇ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಮತ್ತು ಆರೋಪಿಯ ಬಂಧನವಾಗಿರುವುದು ಸಮಾಧಾನಕರ ಸಂಗತಿ. ಆದರೆ, ಫೆಬ್ರವರಿ 19ರಂದು ಬಾಲಕಿಗೆ ರಕ್ತಸ್ರಾವವಾಗಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾತ್ರ ಈ ಗಂಭೀರ ವಿಷಯ ಬಹಿರಂಗವಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. .
ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಪ್ರಾಂಶುಪಾಲರ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಈ ಹಿಂದೆಯೂ ಜಿಲ್ಲೆಯ ಕುಕನೂರು ವಿದ್ಯಾರ್ಥಿನಿಲಯದಲ್ಲಿ ಇಂತಹದ್ದೇ ಪ್ರಕರಣ ವರದಿಯಾಗಿದ್ದರೂ ಸಹ, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳದಿರುವುದು ಮರುಕಳಿಸುತ್ತಿರುವ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೇವಲ ಆರೋಪಿಯ ವಿರುದ್ಧ ಮಾತ್ರವಲ್ಲದೆ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.


