ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕಲಾವಿದ ಯಶವಂತ್ ದೇಶಪಾಂಡೆ (60) ಅವರು, ಹೃದಯಾಘಾತದಿಂದ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶವಂತ್ ದೇಶಪಾಂಡೆ ಅವರು ಕರ್ನಾಟಕದ ಕಲಾವಿದ ಕುಟುಂಬದಿಂದ ಬಂದಿದ್ದು, ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ಅದ್ಭುತ ನಟನೆ ಮತ್ತು ನಿರ್ದೇಶನದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದು, ನಾಟಕದಿಂದ ಸಿನಿಮಾಕ್ಕೆ ಪಯಣ ಬೆಳೆಸಿದ ಯಶವಂತ್, 1990 ರ ದಶಕದಲ್ಲಿ ತಮ್ಮ ಮೊದಲ ಚಿತ್ರದ ಮೂಲಕ ಗಮನ ಸೆಳೆದರು. ಅವರ ಸಹಜ ನಟನೆ, ಭಾವಪೂರ್ಣ ಸಂಭಾಷಣೆ, ಮತ್ತು ಪಾತ್ರಕ್ಕೆ ಜೀವ ತುಂಬುವ ಕಲೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ್ಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.


