ಅಮರಾವತಿ: ‘ಪುಷ್ಪ 2’ ಪ್ರೀಮಿಯರ್ ಶೋ ವೇಳೆ ಚಿತ್ರಮಂದಿರದ ಬಳಿ ಕಾಲ್ತುಳಿತಕ್ಕೆ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಒಂದೇ ದಿನಕ್ಕೆ ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಂತಿಸುವುದು ಏನೂ ಇಲ್ಲ. ನಾನು ಮತ್ತೊಮ್ಮೆ ಮೃತರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ದುರದೃಷ್ಟಕರ ಘಟನೆಯಾಗಿದೆ. ನಡೆದಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ನಟ ಮಾತನಾಡಿದ್ದಾರೆ.
ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ತನಿಖೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 4 ರಂದು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಚಂಚಲಗುಡ ಜೈಲಿನಲ್ಲಿ ಒಂದು ರಾತ್ರಿ ಕಳೆದರು. ನಿನ್ನೆ ತಡರಾತ್ರಿಯವರೆಗೂ ಜಾಮೀನು ಆದೇಶದ ಪ್ರತಿಯನ್ನು ಅಧಿಕಾರಿಗಳು ಸ್ವೀಕರಿಸದ ಕಾರಣ ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೂ ಅವರನ್ನು ಬಿಡುಗಡೆ ಮಾಡಲಾಗಿರಲಿಲ್ಲ.
ಅಲ್ಲು ಅರ್ಜುನ್ ಬಂಧನವಾದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತೆಯ ಪತಿ ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದ್ದರು. ‘ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ನನಗೆ ಬಂಧನದ ಬಗ್ಗೆ ತಿಳಿದಿರಲಿಲ್ಲ. ಅಲ್ಲು ಅರ್ಜುನ್ ಅವರಿಗೂ ನನ್ನ ಹೆಂಡತಿ ಸಾವನ್ನಪ್ಪಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದರು.


