
ಬೆಳಗಾವಿ: ತಾಯಿಯನ್ನು ಕರೆದೊಯ್ದ ವ್ಯಕ್ತಿಯನ್ನು ಮಗ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದ ದುರ್ದೈವಿ. ಸುಮಾರು 10 ವರ್ಷಗಳ ಹಿಂದೆ ಬಸಪ್ಪ, ಆರೋಪಿ ಈರಯ್ಯ ಮಠಪತಿಯ ತಾಯಿಯ ಜೊತೆ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಓಡಿಹೋಗಿದ್ದ. ಅಂದು 18 ವರ್ಷದ ಬಾಲಕನಾಗಿದ್ದ ಈರಯ್ಯ, ಅಂದಿನಿಂದಲೇ ಬಸಪ್ಪನ ಮೇಲೆ ದ್ವೇಷ ಸಾಧಿಸುತ್ತಿದ್ದ.
ಕೊಲ್ಹಾಪುರದಲ್ಲಿ ಈರಯ್ಯನ ತಾಯಿಯನ್ನು ಬಿಟ್ಟು ಬಸಪ್ಪ ನಾಲ್ಕು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಮರಳಿದ್ದ. ಬಸಪ್ಪ ಬಂದಿರುವ ವಿಷಯ ತಿಳಿದ ಈರಯ್ಯ, ಸಂಚು ರೂಪಿಸಿ ಕಾದು ಕುಳಿತಿದ್ದ. ನಿನ್ನೆ ಸಂಜೆ ಬಸಪ್ಪನನ್ನು ಅಡ್ಡಗಟ್ಟಿದ ಈರಯ್ಯ, ಮಚ್ಚಿನಿಂದ 16 ಬಾರಿ ಸಿಕ್ಕಸಿಕ್ಕ ಕಡೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕೊಲೆ ಬಳಿಕ ಈರಯ್ಯ ಶವದ ಮೇಲೆ ಕಾಲಿಟ್ಟು ನಿಂತಿದ್ದ. ಅಷ್ಟೇ ಅಲ್ಲದೆ, ತಾನೇ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿದ್ದಾನೆ. ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ರೋಷದಿಂದ ನಿಂತಿದ್ದ ಈತನ ಕ್ರೌರ್ಯ ಕಂಡು ಹೂಲಿಕಟ್ಟಿ ಗ್ರಾಮವೇ ಬೆಚ್ಚಿಬಿದ್ದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಆರೋಪಿ ಈರಯ್ಯನನ್ನು ಬಂಧಿಸಿದ್ದಾರೆ.




