ಚನ್ನಪಟ್ಟಣದ ಉಪಚುನಾವಣೆಗೆ ರಾಜಕೀಯ ಪಕ್ಷಗಳು ದಿನಾಂಕ ಘೋಷಣೆಯಾಗುವುದಕ್ಕೂ ಮೊದಲೇ ಗರಿಗೆದರಿವೆ. ಸದ್ದಿಲ್ಲದೇ ಇದ್ದ ಚುನಾವಣಾ ಅಖಾಡಕ್ಕೆ ಇದ್ದಕ್ಕಿದ್ದಂತೆ ಇದೀಗ ಜೀವಕಳೆ ಬಂದಂತಿದೆ. ಅಷ್ಟಕ್ಕೂ ಹೀಗೊಂದು ಸದ್ದು ಮಾಡಿದ್ದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್. ಹೆಚ್.ಡಿ.ಕುಮಾರಸ್ವಾಮಿ ತೆನೆಹೊತ್ತ ಮಹಿಳೆಯನ್ನು ಹೊತ್ತು ದೆಹಲಿಯತ್ತ ಕೇಂದ್ರ ಸಚಿವರಾಗಿ ಸಾಗುತ್ತಿದ್ದಂತೆ ಮತದಾನಕ್ಕಾಗಿ ಉಪಚುನಾವಣೆಗೆ ಚನ್ನಪಟ್ಟಣ ಖಾಲಿಯಾಯಿತು. ಬರೀ ಇಷ್ಟೇ ಆಗಿದ್ದರೆ ಈ ಕ್ಷೇತ್ರದ ಉಪಚುನಾವಣೆಗೆ ಱಷ್ಟೊಂದು ಕಾವು ಬರುತ್ತಿತ್ತೋ ಇಲ್ಲವೋ. ಆದರೆ ಒಕ್ಕಲಿಗ ಮತಗಳೇ ಹೆಚ್ಚಾಗಿರುವ ಇಲ್ಲಿ ಈ ಸಮುದಾಯದ ನಾಯಕರದ್ದೇ ಪಾರುಪತ್ಯ. ಕ್ಷೇತ್ರವನ್ನು ಹೇಗಾದರೂ ಮಾಡಿ ತಮ್ಮದೇ ತೆಕ್ಕೆಯಲ್ಲಿ ಉಳಿಸಿಕೊಳ್ಳಬೇಕೆಂಬ ಮಹಾದಾಸೆ ಈ ಮಹಿಳೆಯದ್ದು. ಅಷ್ಟಕ್ಕೂ ಈ ತೆನೆಹೊತ್ತ ಮಹಿಳೆ ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಇದ್ದಂತಿದ್ದ ಸ್ಥಿತಿ ಈಕೆಗೆ ಈಗಿಲ್ಲ. ಯಾಕಂದ್ರೆ, ಹೆಚ್ಡಿಕೆ ಎಂಪಿ ಆಗುತ್ತಿದ್ದಂತೆ ಅದೆಷ್ಟೇ ಕುಟುಂಬದ ಅಪಸ್ವರಗಳ ನಡುವೆಯೂ ಪೆನ್ಡ್ರೈವ್ ಆ ಕೋರ್ಟ್ ಈ ಕೋರ್ಟ್ ಅದು ಇದು ಕೇಸ್ ಎಂದಿದ್ದರೂ ಈ ಮಧ್ಯೆಯೇ ಆಕೆ ಕೊಂಚ ಚಿಗುರಿದ್ದಾಳೆ ಎಂತಲೇ ಹೇಳಬಹುದು. ಇದೆಲ್ಲವನ್ನ ನೋಡಿದರೆ ಕಮಲ ಸಖ್ಯ ಬೆಳೆಸುತ್ತಿದ್ದಂತೆಯೇ ತೆನೆಹೊತ್ತ ಮಹಿಳೆ ಕೊಂಚ ಪ್ರಬಲವಾಗಿದ್ದಾಳೆ ಎನ್ನುವ ಕುರುಹುಗಳು ಇದೀಗ ರಾಜಕೀಯವಲಯದಲ್ಲಿ ಸಿಗತೊಡಗಿವೆ. ಇದೇ ನೋಡಿ ಚನ್ನಪಟ್ಟಣದಿಂದ ಯಾವುದೇ ಪಕ್ಷದಿಂದಲೂ ಟಿಕೇಟ್ ಉಪಚುನಾವಣೆಗೆ ಸ್ಪರ್ಧಿಸಲು ಸಿಗದೇ ಇದ್ದರೂ ಅಖಾಡ ಪ್ರವೇಶಿಸಿಯೇ ತೀರುತ್ತೇನೆ. ಅದು ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಎಂದು ಸಿ.ಪಿ.ಯೋಗೇಶ್ವರ್ ಗುಟುರು ಹಾಕಿದ್ದು.
ಹಳೆ ಮೈಸೂರು ಭಾಗದಲ್ಲಿ ಈಗ ಕೊಂಚ ಕಮಲ ಚಿಗುರಿದೆ. ಮೈಸೂರಿನ ಒಡೆಯರ್ ಇದೀಗ ಎಂಪಿಯೂ ಹೌದು. ಅಳೆದು ತೂಗಿ 10ವರ್ಷದ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತ ನಗುವಂತಾಗಿದೆ. ಕಮಲ ಸಣ್ಣಗೆ ಅರಳುವಂತಾಗಿದೆ. ಇನ್ನೇನು ಮುಗಿದೇ ಹೋಯಿತು ಜೆಡಿಎಸ್ ಎನ್ನುವ ಮಾತಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಸಾಥ್ ನೀಡಿದೆ ಎಂದಲೇ ಹೇಳಬಹುದು. ಇದೇ ನೋಡಿ ಈಗ ಸಿ.ಪಿ.ಯೋಗೇಶ್ವರ್ಗೆ ಮುಳುವಾಗಿದ್ದು. ಬಿಜೆಪಿಯಿಂದ ಇನ್ನೂ ಚನ್ನಪಟ್ಟಣದ ಉಪಚುನಾವಣೆಗೆ ಯಾರು ಅಭ್ಯರ್ಥಿ? ಯಾರನ್ನು ಕಣಕ್ಕೆ ಇಳಿಸುತ್ತೇವೆ ಎಂಬ ಸ್ಪಷ್ಟತೆ ಇಲ್ಲ. ಈ ಮಧ್ಯೆ ಮೈತ್ರಿಯ ಲಾಭ ಪಡೆದುಕೊಂಡ ದೆಹಲಿಗೆ ಸೇರಿರುವ ಹೆಚ್.ಡಿ.ಕುಮಾರಸ್ವಾಮಿ ಹೇಗಾದರೂ ಮಾಡಿ ರಾಜಕೀಯ ಪುನರ್ಜನ್ಮವನ್ನು ತಾನು ರಾಮನಗರದಿಂದ ಕಂಡುಕೊಂಡಂತೆ ಚನ್ನಪಟ್ಟಣದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಕಂಡುಕೊಳ್ಳಲೀ ಎಂಬ ವಾಂಛೆ ಇದೆ. ಈಗಾಗಲೇ ಪತ್ನಿ ಅನಿತಾಕುಮಾರಸ್ವಾಮಿ ಶಾಸಕಿಯೂ ಆಗಿ ಗೆದ್ದಾಗಿದೆ. ಈಗೇನಿದ್ದರೂ ಪುತ್ರನ ಸರದಿ. ಸತತ ಸೋಲುಂಡು ರಾಜಕೀಯದಲ್ಲಿ ಅಷ್ಟೇನೂ ನಿಖಿಲ್ಗೆ ಅಸ್ತಿತ್ವವೇ ಇಲ್ಲ . ಹೆಚ್.ಡಿ.ರೇವಣ್ಣ ಪುತ್ರರಂತೆ ತಮ್ಮ ಮಗನೂ ರಾಜಕೀಯವಾಗಿ ಏನಾದರೂ ಆಗಲೀ ಎಂಬ ಇಚ್ಛೆ ಈ ದಂಪತಿದು. ಹೀಗಾಗಿ ಪುತ್ನನನ್ನು ಸಿದ್ದರಾಮಯ್ಯ ವಿರುದ್ಧದ ಮುಡಾ ಮೈಸೂರು ಪಾದಯಾತ್ರೆಯಲ್ಲಿ ಹೆಚ್ಚಾಗಿಯೇ ತೊಡಗಿಸಿಕೊಂಡಿದ್ದಾಗಿದೆ. ಅದಕ್ಕೆ ತಕ್ಕಂತೆ ನಿಖಿಲ್ ತನ್ನ ಫರ್ಫಾರ್ಮೆನ್ಸ್ ಕೂಡ ಕೊಟ್ಟಾಗಿದೆ. ಈಗೇನಿದ್ದರೂ ರಾಜಕೀಯವಾಗಿ ಮತ್ತೆ ಧುಮುಕಬೇಕಷ್ಟೇ. ಅದಕ್ಕೆ ಈಗ ಎದುರಿಗೋರು ಚನ್ನಪಟ್ಟಣ. ಹೇಗೂ ಜೆಡಿಎಸ್ನ ಮತಗಳು ಅಲ್ಲಿವೆ. ಹೆಚ್ಡಿಕೆಯ ಮತಗಳು ಅಲ್ಲಿರೋದ್ರಿಂದ ಚನ್ನಪಟ್ಟಣವನ್ನು ನಿಖಿಲ್ಗೆ ಬಿಟ್ಟುಕೊಡಬೇಕೆಂಬ ಕಂಡೀಷನ್ ಹೆಚ್ಡಿಕೆದ್ದು ಎನ್ನಲಾಗಿದೆ. ಯಾಕೆಂದ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಂಡೆಯನ್ನ ಕೊಂಚ ಕರಗಿಸಿ ಡಿ.ಕೆ.ಸುರೇಶ್ನನ್ನು ಸೋಲಿಸಿ ಡಾಕ್ಟರ್ ಮಂಜುನಾಥ್ ದೇವೇಗೌಡರ ಅಳಿಯ ಮೈತ್ರಿಯಡಿ ಸಂಸದರಾಗಿ ಆಗಿದೆ. ಹೀಗಾಗಿ ಇದೇ ಕಂಡಿಷನ್ ಅನ್ನ ಹೆಚ್ಡಿಕೆ ತನ್ನ ತಂದೆ ದೇವೇಗೌಡರಾದಿಯಾಗಿ ಬಿಜೆಪಿಯ ದೆಹಲಿಯ ವರಿಷ್ಠರಿಗೆ ಹೇಳಿದ್ದಾರೆನ್ನಲಾಗಿದೆ. ಇದು ಸಿ.ಪಿ.ಯೋಗೇಶ್ವರ್ಗೆ ಇಲ್ಲದಂತಹ ಟೆನ್ಷನ್ ತಂದಿದೆ. ಈ ಕ್ಷೇತ್ರಹಿಂದೆ ಈ ಹಿಂದೆ ಹೆಚ್ಡಿಕೆ,, ಸಿ.ಪಿ.ಯೋಗೇಶ್ವರ್ ಪರಸ್ಪರ ಸ್ಪರ್ಧಿಗಳಾಗಿದ್ದವರು. ಹೆಚ್ಡಿಕೆ ಜೆಡಿಎಸ್ನಿಂದ ಸ್ಪರ್ಧಿಸಿದ್ದರೆ, ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ. ಈಗ ಬಿಜೆಪಿ ನಾಯಕರ ಒಲವು ತನಗಿಂತ ಹೆಚ್ಡಿಕೆ ಮೇಲೆ ಹೆಚ್ಚಾಗಿ ನೆಟ್ಟಿದೆ. ಹೀಗಾಗಿ ಬಿಜೆಪಿಯಿಂದ ಟಿಕೆಟ್ ತನಗೆ ಸಿಗುವ ಸೂಚನೆ ಯಾವುದೂ ಕೂಡ ಸಿ.ಪಿ.ಯೋಗೇಶ್ವರಗೆ ಸಿಕ್ಕಿಲ್ಲ. ಅದಕ್ಕೆ ನೋಡಿ ಸಿ.ಪಿ.ಯೋಗೇಶ್ವರ್ ಸ್ವತಂತ್ರವಾಗಿ ಕಣಕ್ಕಿಳಿಯೋಕೆ ನಿರ್ಧಾರ ಮಾಡಿದ್ದು. ಅದೇನೇ ಆಗಲೀ ಇಚ್ಛೇ ಯಾರದ್ದೇ ಇರಲೀ ಹೋರಾಟ ಏನೇ ಒಳಗೊಳಗೆ ನಡೆದಿರಲೀ ಅಧಿಕೃತವಾಗಿ ಅಭ್ಯರ್ಥಿಯ ಆಯ್ಕೆಯ ಬಳಿಕವಷ್ಟೇ ಅಸಲೀ ಖೇಲ್ ಶುರುವಾಗೋದು.
ವಿಶೇಷ ವರದಿ: ಸಂಧ್ಯಾ ಸೊರಬ