
ನವದೆಹಲಿ: ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡುವ ಮೂಲಕ ಚಾರಿತ್ರಿಕ ನಿರ್ಧಾರ ಪ್ರಕಟಿಸಿದೆ. ಮೋದಿ-ಟ್ರಂಪ್ ಸ್ನೇಹದ ಈ ಬಿಗ್ ರಿಲೀಫ್ ಬೆನ್ನಲ್ಲೇ, ಎನ್‌ಡಿಎ ಮೈತ್ರಿಕೂಟದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ತಿನಲ್ಲಿ ವಿಜಯೋತ್ಸವದ ಸನ್ಮಾನ ನೆರವೇರಿಸಿದ್ದಾರೆ.
ಸಂಸತ್ ಆವರಣದಲ್ಲಿ ಮೊಳಗಿದ ‘ಜೈ ಹೂಂಕಾರ್’
ಫೆಬ್ರವರಿ 3ರಂದು ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆ ಸಂಭ್ರಮದ ಕಡಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಮೈತ್ರಿಕೂಟದ ಎಲ್ಲಾ ಸಂಸದರು ಮೋದಿ ಅವರನ್ನು ಬೃಹತ್ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ “ಭಾರತ್ ಮಾತಾ ಕೀ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳು ಸಂಸತ್ ಭವನದ ಕಾರಿಡಾರ್‌ಗಳಲ್ಲಿ ಪ್ರತಿಧ್ವನಿಸಿದವು.
ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ನಿರಂತರ ದೂರವಾಣಿ ಸಂಭಾಷಣೆಗಳು ಈ ಒಪ್ಪಂದಕ್ಕೆ ಭದ್ರ ಬುನಾದಿ ಹಾಕಿವೆ. ವ್ಯಾಪಾರ ಸಮರಕ್ಕೆ ಬ್ರೇಕ್ ಹಾಕಿ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಉಭಯ ನಾಯಕರು ತೋರಿದ ಆಸಕ್ತಿಯ ಫಲವಾಗಿ ಭಾರತಕ್ಕೆ ಈಗ ದೊಡ್ಡ ಮಟ್ಟದ ಆರ್ಥಿಕ ಲಾಭ ದೊರೆತಿದೆ.
2026ರ ಬಜೆಟ್ ಅಧಿವೇಶನದ ಎರಡನೇ ದಿನವೇ ಈ ಶುಭ ಸುದ್ದಿ ಬಂದಿರುವುದು ಆಡಳಿತ ಪಕ್ಷಕ್ಕೆ ಹೊಸ ಚೈತನ್ಯ ನೀಡಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ಈ ವ್ಯಾಪಾರ ಒಪ್ಪಂದವು ಪ್ರಮುಖ ಅಸ್ತ್ರವಾಗಲಿದೆ. ಸಭೆಯಲ್ಲಿ ಸದನದ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಲಾಯಿತು.
ಅಮೆರಿಕವು ಸುಂಕವನ್ನು ಶೇ. 18ಕ್ಕೆ ಇಳಿಸಿರುವುದರಿಂದ ಭಾರತೀಯ ರಫ್ತುದಾರರಿಗೆ ಹೊಸ ಬಾಗಿಲು ತೆರೆದಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳು ಇನ್ನು ಮುಂದೆ ಅಗ್ಗದ ದರದಲ್ಲಿ ಲಭ್ಯವಾಗಲಿದ್ದು, ದೇಶದ ಆರ್ಥಿಕತೆಗೆ ಇದು ದೊಡ್ಡ ಮಟ್ಟದ ಬೂಸ್ಟರ್ ಡೋಸ್ ನೀಡಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.




