ತುಮಕೂರು: ಮಧುಗಿರಿಯ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಲಂಚದ ಮಾಟ ಮಾಯಾ ನಡೆದಿದೆ. ಶಿರಾ ತಾಲೂಕಿನ ಎಲೆಯೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ, ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.


ವಶಕ್ಕೆ ಪಡೆದವರಲ್ಲಿ ಉಪ ನಿಬಂಧಕ ಸಣ್ಣಪಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಇದ್ದಾರೆ. ಶಿರಾ ತಾಲೂಕಿನ ಎಲೆಯೂರು ಮೀನುಗಾರಿಕೆ ಸಹಕಾರ ಸಂಘದ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಅದನ್ನು ತೆರವುಗೊಳಿಸಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಹೇಳಲಾಗಿದೆ.
ಈ ಬಗ್ಗೆ ಮೀನುಗಾರಿಕೆ ಸಂಘದ ಪದಾಧಿಕಾರಿ ರವೀಶ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಲಕ್ಷ್ಮೀ ನಾರಾಯಣ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರಾಜು, ಸಲೀಂ, ಸುರೇಶ್ ಮತ್ತು ಶಿವರುದ್ದಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.


