ಹುಬ್ಬಳ್ಳಿ: ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ನಡುವಿನ ವೈಮನನ್ಸು ತೀವ್ರಗೊಂಡಿದೆ. ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಟ್ರಸ್ಟ್ ಮುಂದಾಗಿದ್ದು, ಈ ಮೂಲಕ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸುವ ಮುನ್ಸೂಚನೆ ನೀಡಿದೆ . ಈ ಮಧ್ಯೆ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿರುವ ವಿಜಯಾನಂದ ಕಾಶಪ್ಪನವರ ಜಯಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ. ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕುಳಿತಿದ್ದಾರೆ. ಓರ್ವ ವ್ಯಕ್ತಿ ಪರವಾಗಿ ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದಬ್ಬಾಳಿಕೆ ದೌರ್ಜನ್ಯ ನಡೆದಿವೆ. ಆದ್ರೆ ಅಲ್ಲಿಗೆ ಹೋಗಿ ಯಾರಿಗೂ ಸಾಂತ್ವನ ಹೇಳುತ್ತಿಲ್ಲ. ಜಯಮೃತ್ಯುಂಜಯ ಸ್ವಾಮೀಜಿ ಪ್ರಚಾರ ಪ್ರಿಯರಾಗಿದ್ದು, ಮುಂಜಾನೆ ಎದ್ರೆ ಬರಿ ಫೇಸ್ ಬುಕ್ ಲೈವ್ ನಲ್ಲಿರುತ್ತಾರೆ ಎಂದು ಸ್ವಾಮೀಜಿ ವಿರುದ್ಧ ಕಿಡಿಕಾರಿದ್ರು.
ಮುಂದೆ ಏನು ಮಾಡಬೇಕು ಅನ್ನೋ ಬಗ್ಗೆ ಹಿರಿಯರ ಜೊತೆ ಚರ್ಚೆ ಮಾಡಿದ್ದೇವೆ. ಕೂಡಲ ಸಂಗಮ ಪೀಠದ ರಕ್ಷಣೆ ಮಾಡೋ ಜವಾಬ್ದಾರಿಯನ್ನು ಸಮಾಜ ನನಗೆ ನೀಡಿದೆ. ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಚಿಂತನೆ ಮಾಡಿದ್ದೇವೆ. ಅಲ್ಲಿ ಓರ್ವ ಗುರುಗಳನ್ನ ನೇಮಕ ಮಾಡೋದು ಕೂಡಾ ಸತ್ಯ. ಮಠದಿಂದ ಟ್ರಸ್ಟ್ ಅಲ್ಲ, ಬದಲಾಗಿ ಟ್ರಸ್ಟ್ನಿಂದ ಸ್ವಾಮೀಜಿ ನೇಮಕ ಮಾಡಲಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಟ್ರಸ್ಟ್ಗೆ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿಗೆ ಕಾಶಪ್ಪನವರ ಸಂದೇಶ ರವಾನೆ ಮಾಡಿದ್ದಾರೆ.


