
ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರು ಬೆಂಗಳೂರಿನ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು .. ಈ ಆಘಾತಕಾರಿ ಘಟನೆ ಸಂಭವಿಸಿದ ತಕ್ಷಣ ಅಶೋಕ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಉದ್ಯಮ ರಂಗದಲ್ಲಿ ಗುರುತಿಸಿಕೊಂಡಿದ್ದ ರಾಯ್ ಅವರ ಈ ತೀವ್ರ ನಿರ್ಧಾರವು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡಕ್ಕೆ ಇಂದು ಸಿ.ಜೆ. ರಾಯ್ ಅವರು ಬಳಸುತ್ತಿದ್ದ ಎರಡು ಸಿಮ್ ಕಾರ್ಡ್ಗಳ ಕಾಲ್ ಡಿಟೇಲ್ ರೆಕಾರ್ಡ್ಸ್ ಲಭ್ಯವಾಗುವ ಸಾಧ್ಯತೆಯಿದೆ. ರಾಯ್ ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ಯಾರಿಗೆ ಕರೆ ಮಾಡಿದ್ದರು, ಎಷ್ಟು ಸಮಯ ಸಂಭಾಷಣೆ ನಡೆಸಿದ್ದರು ಎಂಬ ಮಹತ್ವದ ಮಾಹಿತಿಯನ್ನು ಈ ವರದಿ ನೀಡಲಿದೆ. ನಾರ್ಮಲ್ ಕಾಲ್ಗಳ ವಿವರಗಳು ಸಿಕ್ಕರೆ, ಅವರು ಅನುಭವಿಸುತ್ತಿದ್ದ ಒತ್ತಡ ಅಥವಾ ಸಾವಿಗೆ ಪ್ರಚೋದನೆ ನೀಡಿದ ಅಂಶಗಳ ಬಗ್ಗೆ ಸುಳಿವು ಸಿಗಬಹುದು ಎಂದು ಪೊಲೀಸರು ನಂಬಿದ್ದಾರೆ.
ರಾಯ್ ಅವರ ಎಲ್ಲಾ ವ್ಯವಹಾರಿಕ ವಹಿವಾಟುಗಳನ್ನು ಪರಿಶೀಲಿಸಲು ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಿದೆ. ಕಾನ್ಫಿಡೆಂಟ್ ಗ್ರೂಪ್ನ ಆರ್ಥಿಕ ಸ್ಥಿತಿಗತಿ ಮತ್ತು ಬ್ಯಾಂಕ್ ವ್ಯವಹಾರಗಳ ಮೇಲೆ ಬೆಳಕು ಚೆಲ್ಲಲು ಎಸಿಪಿ ನೇತೃತ್ವದ ಪ್ರತ್ಯೇಕ ತಂಡ ಸಜ್ಜಾಗಿದೆ. ಕಂಪನಿಯು ಯಾರ ಜೊತೆ ಎಷ್ಟು ಮೊತ್ತದ ವಹಿವಾಟು ನಡೆಸಿದೆ ಎಂಬ ವಿವರಗಳನ್ನು ಕಲೆಹಾಕಲು ಸುಮಾರು ಐದಕ್ಕೂ ಹೆಚ್ಚು ಬ್ಯಾಂಕ್ಗಳಿಗೆ ಪೊಲೀಸರು ಅಧಿಕೃತ ಪತ್ರ ಬರೆದು ಮಾಹಿತಿ ಕೋರಿದ್ದಾರೆ.
ಸದ್ಯಕ್ಕೆ ಎಸ್ಐಟಿ ಅಧಿಕಾರಿಗಳು ಬ್ಯಾಂಕ್ ಅಕೌಂಟ್ಗಳ ವಿವರ ಮತ್ತು ಸಿಡಿಆರ್ ವರದಿಯ ವಿಶ್ಲೇಷಣೆಯ ಮೇಲೆ ಗಮನ ಹರಿಸಿದ್ದಾರೆ. ವ್ಯವಹಾರದಲ್ಲಿನ ನಷ್ಟ ಅಥವಾ ವೈಯಕ್ತಿಕ ಕಾರಣಗಳು ಈ ಆತ್ಮಹತ್ಯೆಯ ಹಿಂದೆ ಇವೆಯೇ ಎಂಬುದು ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.




