Tuesday, February 24, 2026
29.9 C
Bengaluru
Google search engine
LIVE
ಮನೆರಾಜಕೀಯಕುರ್ಚಿಗೆ ಕಂಟಕ ಬಂದಾಗ ಸಿದ್ದರಾಮಯ್ಯಗೆ ಜಾತಿ ನೆನಪಾಗುತ್ತೆ; ಸಿ.ಟಿ. ರವಿ ವಾಗ್ದಾಳಿ!

ಕುರ್ಚಿಗೆ ಕಂಟಕ ಬಂದಾಗ ಸಿದ್ದರಾಮಯ್ಯಗೆ ಜಾತಿ ನೆನಪಾಗುತ್ತೆ; ಸಿ.ಟಿ. ರವಿ ವಾಗ್ದಾಳಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಸಾಮಾಜಿಕ ನ್ಯಾಯ ಮತ್ತು ಜಾತಿ ಅಸ್ತ್ರವನ್ನು ಬಳಸುತ್ತಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಇಷ್ಟೆಲ್ಲಾ ಅಧಿಕಾರ ಅನುಭವಿಸಿದರೂ ಈಗ ಮತ್ತೆ ಜಾತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ರವಿ, ಸಿದ್ದರಾಮಯ್ಯ ಸಿಎಂ ಆದ ಮೇಲೆ ನಿಜವಾಗಿ ಎಷ್ಟು ಜನ ಕುರಿ ಕಾಯುವವರು ಮತ್ತು ಶೋಷಿತ ಸಮುದಾಯದವರು ಆರ್ಥಿಕವಾಗಿ ಮೇಲೆ ಬಂದಿದ್ದಾರೆ ಎಂಬ ಬಗ್ಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.

ದಲಿತ ಮುಖ್ಯಮಂತ್ರಿ ವಿಚಾರವಾಗಿ ಸಿದ್ದರಾಮಯ್ಯ ಅವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಕಿಡಿಕಾರಿದ ಸಿ.ಟಿ. ರವಿ, 2018ರ ವಿಧಾನಸಭಾ ಚುನಾವಣೆಯ ಇತಿಹಾಸವನ್ನು ಮೆಲುಕು ಹಾಕಿದ್ದಾರೆ. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರ ಸೋಲಿಗೆ ಷಡ್ಯಂತ್ರ ರೂಪಿಸಿದ್ದು ಯಾರು ಎಂದು ಪರಮೇಶ್ವರ್ ಅವರನ್ನೇ ಕೇಳಿ ಎಂದು ರವಿ ಹೇಳಿದ್ದಾರೆ. ಸಂವಿಧಾನ ಮತ್ತು ಬಸವಣ್ಣನವರ ತತ್ವಗಳ ಬಗ್ಗೆ ಮಾತನಾಡುವವರೇ ಅಂದು ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸಲು ಸಂಚು ನಡೆಸಿದ್ದರು. ಈ ಮರ್ಮ ಜನರಿಗೆ ಅರ್ಥವಾದರೆ ಸಿದ್ದರಾಮಯ್ಯ ಅವರು ಈಗ ಯಾವ ಕಾರಣಕ್ಕೆ ಇಂತಹ ಹೆಸರುಗಳನ್ನು ಮುನ್ನಲೆಗೆ ತರುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣದ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿರುವಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಿ ಅದು ಅವರದ್ದೇ ಎಂದು ದೃಢಪಡಿಸುವ ಮೊದಲೇ ಬಂಧಿಸಿರುವುದು ಷಡ್ಯಂತ್ರದ ಭಾಗವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗುತ್ತಿಗೆದಾರರಿಂದ ಶಾಸಕರು ನೇರವಾಗಿ ಹಣ ಪಡೆದಿಲ್ಲ, ಕೇವಲ ಆಡಿಯೋ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಪೊಲೀಸ್ ಇಲಾಖೆ ಮತ್ತು ತನಿಖಾ ಸಂಸ್ಥೆಗಳು ಸತ್ಯಾಸತ್ಯತೆಯನ್ನು ಹೊರತರಲಿ ಎಂದು ಆಗ್ರಹಿಸಿರುವ ಸಿ.ಟಿ. ರವಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂಬ ವಿಷಯದಲ್ಲಿ ಎರಡನೇ ಮಾತಿಲ್ಲ ಎಂದಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬ ಗಾದೆಯಂತೆ ಯಾರೇ ಅಪರಾಧ ಎಸಗಿದ್ದರೂ ಕಾನೂನು ತನ್ನ ಕ್ರಮ ಜರುಗಿಸಲಿ. ಆದರೆ ರಾಜಕೀಯ ದ್ವೇಷಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಮತ್ತು ಪ್ರಕರಣದ ಸಂಪೂರ್ಣ ತನಿಖೆಯಾಗುವವರೆಗೆ ನಾವು ಯಾರನ್ನೂ ಅಪರಾಧಿ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments