
ಕೊಪ್ಪಳ ಜಿಲ್ಲೆಯ ಹನಮಸಾಗರ ಪೊಲೀಸ್ ಠಾಣೆಯ ಪೇದೆಯೊಬ್ಬರು ಹಾಕಿರುವ ವಾಟ್ಸಾಪ್ ಸ್ಟೇಟಸ್ ಈಗ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ‘ಪೊಲೀಸ್ ಕೆಲಸ ಮಾಡುವುದಕ್ಕಿಂತ ಎಗ್ ರೈಸ್ ಮಾರಿ ಬದುಕುವುದೇ ಉತ್ತಮ’ ಎಂಬ ಅವರ ಸಾಲುಗಳು ಇಲಾಖೆಯ ಒಳಗಿನ ಕೆಲಸದ ಒತ್ತಡವನ್ನು ಸಾರುತ್ತಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.
ಕೊಪ್ಪಳ ಜಿಲ್ಲೆಯ ಹನಮಸಾಗರ ಠಾಣೆಯ ಪೇದೆ ಬ್ರಹ್ಮಾನಂದ ಎಂಬುವವರು ಇಲಾಖೆಯ ವಿರುದ್ಧವೇ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ 8,300 ಪೊಲೀಸ್ ಪೇದೆಗಳ ನೇಮಕಾತಿಗೆ ಮುಂದಾಗಿರುವ ವರದಿಯೊಂದನ್ನು ಹಂಚಿಕೊಂಡಿದ್ದ ಅವರು, ಅದರ ಜೊತೆಗೆ “ವರ್ಷದ 365 ದಿನವೂ ಕೆಲಸ ಇರುತ್ತದೆ, ಒಂದು ದಿನವೂ ರಜೆ ಇರುವುದಿಲ್ಲ. ಈ ಕೆಲಸಕ್ಕಿಂತ ರಸ್ತೆ ಬದಿಯಲ್ಲಿ ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ಉತ್ತಮ. ಹೊಸದಾಗಿ ಪೊಲೀಸ್ ಇಲಾಖೆ ಸೇರುವವರು ನೂರು ಬಾರಿ ಯೋಚಿಸಿ ಬನ್ನಿ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಇಲಾಖೆ ಎಚ್ಚೆತ್ತುಕೊಂಡಿದೆ.
ಪೇದೆಯ ಈ ವರ್ತನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರು, ಇದು ಪೂರ್ತಿಯಾಗಿ ಬ್ರಹ್ಮಾನಂದ ಅವರ ವೈಯಕ್ತಿಕ ಅಸಮಾಧಾನದಿಂದ ಹಾಕಿರುವ ಪೋಸ್ಟ್ ಎಂದು ಸ್ಪಷ್ಟಪಡಿಸಿದ್ದಾರೆ. “ಪೊಲೀಸ್ ಇಲಾಖೆಯು ಅತ್ಯಂತ ಶಿಸ್ತಿನ ಇಲಾಖೆಯಾಗಿದ್ದು, ಇಲ್ಲಿನ ಸಮಸ್ಯೆಗಳನ್ನು ಹಂಚಿಕೊಳ್ಳಲು ಆಂತರಿಕ ವೇದಿಕೆಗಳಿವೆ. ಅದನ್ನು ಬಿಟ್ಟು ಈ ರೀತಿ ಸಾರ್ವಜನಿಕವಾಗಿ ಇಲಾಖೆಯ ವಿರುದ್ಧ ಪೋಸ್ಟ್ ಹಾಕುವುದು ಶಿಸ್ತು ಉಲ್ಲಂಘನೆಯಾಗುತ್ತದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಜೆ ನೀಡದ ಕಾರಣಕ್ಕೆ ಪೇದೆ ನೊಂದಿದ್ದಾರೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಸ್ಪಿ, ಬ್ರಹ್ಮಾನಂದ ಅವರು ಕಳೆದ ಒಂದು ವರ್ಷದಲ್ಲಿ ಈಗಾಗಲೇ 25 ರಜೆಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಸಿಬ್ಬಂದಿಗೆ ತುರ್ತು ಅವಶ್ಯಕತೆ ಇದ್ದಾಗ ರಜೆ ನೀಡಲು ಇಲಾಖೆ ಸದಾ ಸಿದ್ಧವಿರುತ್ತದೆ. ಆದರೆ, ಬಂದೋಬಸ್ತ್ ಮತ್ತು ಕರ್ತವ್ಯದ ಒತ್ತಡಗಳು ಈ ಇಲಾಖೆಯಲ್ಲಿ ಸಹಜವಾಗಿದ್ದು, ಅದನ್ನು ನಿಭಾಯಿಸಲು ತರಬೇತಿಯಲ್ಲೇ ಮನೋವೈದ್ಯಕೀಯ ಸಮಾಲೋಚನೆಗಳನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸದ್ಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ, ಹನಮಸಾಗರ ಪಿಎಸ್‌ಐ ಅವರಿಂದ ಸಮಗ್ರ ವರದಿ ತರಿಸಿಕೊಳ್ಳುತ್ತಿದ್ದಾರೆ. ಪೇದೆಯ ಮೇಲೆ ಯಾರಾದರೂ ಒತ್ತಡ ಹೇರಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಪೇದೆಗೆ ಅಧಿಕೃತವಾಗಿ ನೋಟಿಸ್ ನೀಡಿ ವಿವರಣೆ ಕೇಳಲಾಗಿದ್ದು, ತನಿಖೆಯ ವರದಿ ಬಂದ ಬಳಿಕ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.




