ಹೈದರಾಬಾದ್: ಜನಪ್ರಿಯ ತೆಲುಗು ನಟ ಪಿಶ್ ವೆಂಕಟ್ ಮೂತ್ರ ಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಶುಕ್ರವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳ ಹಿಂದೆ ನಟನಿಗೆ ಮೂತ್ರಪಿಂಡದ ಸಮಸ್ಯೆ ಉಂಟಾಗಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತೀಚೆಗೆ, ಫಿಶ್ ವೆಂಕಟ್ ಅವರ ಮಗಳು, ವೈದ್ಯರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ ಆದರೆ ಕುಟುಂಬವು ದುಬಾರಿ ವೈದ್ಯಕೀಯ ವಿಧಾನವನ್ನು ಭರಿಸಲು ಅಸಮರ್ಥವಾಗಿದೆ ಎಂದು ಹೇಳಿದ್ದರು.
ಅಪ್ಪನ ಆರೋಗ್ಯ ಸರಿಯಿಲ್ಲ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಅವರಿಗೆ ಮೂತ್ರಪಿಂಡ ಕಸಿ ಮಾಡಬೇಕಾಗಿದೆ, ಇದಕ್ಕೆ ಕನಿಷ್ಠ 50 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಜನಿಸಿದ ಈ ನಟ 2000ದ ದಶಕದ ಆರಂಭದಲ್ಲಿ ಖುಷಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಟಾಲಿವುಡ್ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು ತಮ್ಮ ಅದ್ಭುತ ಹಾಸ್ಯ ಸಮಯಪ್ರಜ್ಞೆ ಮತ್ತು ಸ್ಮರಣೀಯ ಅಭಿನಯಕ್ಕೆ ಹೆಸರುವಾಸಿಯಾಗಿದ್ದರು.