ಪಂಚಾಯ್ತಿ ಎಲೆಕ್ಷನ್, ಪಕ್ಷಗಳ ಚಿಹ್ನೆ ಮೇಲೆ ನಡೆಯದೇ ಹೋದರೂ, ಆಡಳಿತ ಪಕ್ಷ, ವಿರೋಧ ಪಕ್ಷಗಳಿಗೂ ಪ್ರತಿಷ್ಠೆ. ಹಳ್ಳಿ ಗೆದ್ರೆನೇ ದಿಲ್ಲಿ ಗೆಲ್ಲೋಕೆ ಸಾಧ್ಯ. ಸೋ, ಪಂಚಾಯ್ತಿ ಫೈಟ್, ಪ್ರತಿಷ್ಠೆಯ ಕಾಳಗ ಅನ್ನೋದಲ್ಲಿ ನೋ ಡೌಟು. ಹೀಗಾಗಿನೇ ಎರಡೂವರೆ ವರ್ಷದಿಂದ ಎಲೆಕ್ಷನ್ಗಾಗಿ ಕಾಯ್ತಿದ್ದ ಅಭ್ಯರ್ಥಿಗಳು ಈಗ ದಿಢೀರ್ ಅಂತ ಫುಲ್ ಆಕ್ಟೀವ್ ಆಗಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಇದ್ದು, ದಿಲ್ಲಿ ಅಖಾಡದಷ್ಟೇ ರೋಚಕತೆ ಹಳ್ಳಿ ಅಖಾಡದಲ್ಲೂ ಇರಲಿದೆ.

ಎಲ್ಲವೂ ಅಂದುಕೊಂಡತೆ ಆಗಿದ್ದಿದ್ರೆ, ಎರಡೂವರೆ ವರ್ಷಗಳ ಹಿಂದೆಯೇ ಎಲೆಕ್ಷನ್ ಆಗ್ಬೇಕಿತ್ತು. ಆದ್ರೆ, ಕೋವಿಡ್ ಜೊತೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ಸಮಸ್ಯೆ ಚುನಾವಣೆಗೆ ತೊಡಕಾಗಿತ್ತು. ಈಗ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರ ಮರುವಿಂಗಡಣೆ ಹಾಗೂ ಪ್ರವರ್ಗವಾರು ಮೀಸಲು ಕೊನೆಗೂ ಫೈನಲ್ ಆಗಿದೆ. ಇದಕ್ಕೆ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸನ್ನು ಸರಕಾರ ಅಂಗೀಕರಿಸಿದೆ. ಇದರಿಂದಾಗಿ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲಾ ಪಂಚಾಯತಿಗಳಿಗೆ ಒಟ್ಟು 1,101 ಸದಸ್ಯರು ಹಾಗೂ 234 ತಾಲೂಕು ಪಂಚಾಯಿತಿಗಳಿಗೆ 3,621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ.

ಸದ್ಯ, ಸದಸ್ಯರ ಸಂಖ್ಯೆ ನಿರ್ಣಯಿಸುವ ಜೊತೆಗೆ ಪ್ರವರ್ಗವಾರು ಶೇಕಡಾ 33 ಹಾಗೂ ಶೇಕಡಾ 50 ಮಹಿಳಾ ಮೀಸಲು ನಿಗದಿಪಡಿಸಲಾಗಿದೆ. ಕ್ಷೇತ್ರವಾರು ಮೀಸಲು ನಿಗದಿ ಆಗಬೇಕಿದ್ದು, ಬಳಿಕ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸುವುದು ಬಾಕಿ ಇದೆ. ಈ ಪ್ರಕ್ರಿಯೆ ಯಾವಾಗ ಪೂರ್ಣ ಆಗ್ತಿದ್ದಂತೆ ಎಲೆಕ್ಷನ್ ಘೋಷಣೆ ಆಗಲಿದೆ.
ಪ್ರತಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಿಗೆ ನಿಗದಿಪಡಿಸಲಾದ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇಕಡಾ 50 ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗಕ್ಕೆ ಮೀಸಲಿರಿಸಲಾಗಿದೆ. ಉಳಿದ ಅರ್ಧದಷ್ಟು ಸ್ಥಾನಗಳು ಸಾಮಾನ್ಯ ವರ್ಗದ ಸ್ಥಾನಗಳೆಂದು ಪರಿಗಣಿಸಲಾಗಿದೆ. ಪ್ರತಿ ಪ್ರವರ್ಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲು ನಿಗದಿಪಡಿಸಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ ನೇತೃತ್ವದ ಆಯೋಗವು ಜಿಪಂ ಮತ್ತು ತಾಪಂಗಳಿಗೆ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ, ಪ್ರವರ್ಗವಾರು ಮೀಸಲು ನಿಗದಿಪಡಿಸಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಮತ್ತೊಬ್ಬ ಐಎಎಸ್ ಅಧಿಕಾರಿ ಎಂ.ಆರ್.ಕಾಂಬ್ಳೆ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದ ಬಳಿಕ ಈ ಶಿಫಾರಸುಗಳನ್ನು ಸರಕಾರ ಒಪ್ಪಿಕೊಂಡು ಅಧಿಸೂಚನೆ ಹೊರಡಿಸಿದೆ. ಒಟ್ನಲ್ಲಿ, ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಂಚಾಯ್ತಿ ಫೈಟ್ ಗೆ ದಿನಗಣನೆ ಶುರುವಾಗಿದೆ.