ಕೇರಳದ ಕೊಚ್ಚಿಯಲ್ಲಿ ನಡೆದ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಲಂಕೇಶ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಸಮರ್ಜಿತ್ ಲಂಕೇಶ್ ಅವರು ‘ಅತ್ಯುತ್ತಮ ನವನಟ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಮರ್ಜಿತ್, ತಮ್ಮ ಚೊಚ್ಚಲ ಚಿತ್ರದಲ್ಲೇ ಯಶಸ್ವಿಯಾಗಿದ್ದಾರೆ.
ಲಂಕೇಶ್ ಕುಟುಂಬಕ್ಕೆ ಇದು ಹ್ಯಾಟ್ರಿಕ್ ಫಿಲ್ಮ್‌ಫೇರ್ ಸಂಭ್ರಮವಾಗಿದೆ. ಮೊದಲು 1980ರಲ್ಲಿ ಖ್ಯಾತ ಸಾಹಿತಿ ಪಿ. ಲಂಕೇಶ್ ಅವರು ‘ಎಲ್ಲಿಂದಲೋ ಬಂದವರು’ ಚಿತ್ರದ ನಿರ್ದೇಶನಕ್ಕಾಗಿ ಈ ಪ್ರಶಸ್ತಿ ಪಡೆದಿದ್ದರು. ನಂತರ ಅವರ ಪುತ್ರ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಪಡುಕೋಣೆ ಅಭಿನಯದ ‘ಐಶ್ವರ್ಯ’ ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು. ಈಗ ಮೊಮ್ಮಗ ಸಮರ್ಜಿತ್ ಲಂಕೇಶ್ ನಟನೆಯಲ್ಲಿ ಪ್ರಶಸ್ತಿ ಪಡೆಯುವ ಮೂಲಕ ತಾತ ಮತ್ತು ತಂದೆಯ ಹಾದಿಯಲ್ಲೇ ಸಾಗಿ ಲಂಕೇಶ್ ಕುಟುಂಬದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
‘ಗೌರಿ’ ಚಿತ್ರದ ಸಕ್ಸಸ್ ನಂತರ ಸಮರ್ಜಿತ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರೊಂದಿಗೆ ‘ವೃಷಭ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅವರು, ಸದ್ಯ ಒಂದು ದೊಡ್ಡ ಹಿಂದಿ ಸಿನಿಮಾ ಹಾಗೂ ಒಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುತ್ತಿರುವ ಸಮರ್ಜಿತ್, ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದ್ದಾರೆ.


