ಮಕರ ಸಂಕ್ರಾಂತಿಯ ಸಡಗರ ನಮ್ಮ ರಾಜ್ಯ ಸೇರಿದಂತೆ, ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯವು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಹಬ್ಬವನ್ನು ಆಚರಿಸುತ್ತಾರೆ. ಸುಗ್ಗಿಯ ಕಾಲವನ್ನ ಭಾರತದಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಬಹುಪಾಲು ರಾಜ್ಯಗಳು ಸಂಕ್ರಾಂತಿಯನ್ನು ಆಚರಿಸುತ್ತವೆ. ಈ ವರ್ಷ ಜನವರಿ 15 ರಂದು ಸೋಮವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯು ಸೂರ್ಯನೊಂದಿಗೆ ಸಂಬಂಧವನ್ನು ಹೊಂದಿದ ಹಬ್ಬವಾಗಿದೆ. ಈ ಹಬ್ಬವನ್ನು ಸೌರ ಚಕ್ರಗಳ ಆಧಾರದ ಮೇಲೆ ಆಚರಿಸಲಾಗುತ್ತದೆ. ಸೂರ್ಯನು 6 ತಿಂಗಳ ಕಾಲ ಉತ್ತರದ ಕಡೆಗೆ ಚಲಿಸುವ ಸಮಯ ಇದು. ಇದನ್ನೇ ಸೂರ್ಯನ ಉತ್ತರಾಯಣ ಸಂಚಾರ ಎಂದು ಕರೆಯಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ. ಈ ದಿನ ಎಳ್ಳು – ಬೆಲ್ಲವನ್ನು ಪರಸ್ಪರ ಹಂಚುವ ಮೂಲಕ ಹಬ್ಬದ ಖುಷಿಯನ್ನು ಸಂಭ್ರಮಿಸಲಾಗುತ್ತದೆ.
ಮಕರ ಸಂಕ್ರಾಂತಿ ಇತಿಹಾಸ
ಸಂಕ್ರಾಂತಿಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಕೊಂದಿತು. ಮಕರ ಸಂಕ್ರಾಂತಿಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ದೇವತೆಯನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಭಾರತದ ಎರಡು ಮಹಾಕಾವ್ಯ ಗ್ರಂಥಗಳಾದ ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ, ವೈದಿಕ ಋಷಿ ವಿಶ್ವಾಮಿತ್ರನು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನು ಮತ್ತು ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಿದರು ಎನ್ನುವ ನಂಬಿಕೆಯಿದೆ.