ಬೆಂಗಳೂರು ಕೃಷಿ ವಿವಿ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತದೆ. ಇದೀಗ ಕೃಷಿ ವಿವಿ ವಿಭಜನೆ ಕುರಿತಂತೆ ಸಾಕಷ್ಟು ಪರ ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ. ಕೃಷಿ ವಿವಿ ವಿಭಜನೆಯನ್ನು ತಡೆಯುವ ಉದ್ದೇಶದಿಂದ ಕೆಲ ರೈತಪರ ರಾಜಕಾರಣಿಗಳು ಇದೀಗ ಧ್ವನಿ ಎತ್ತಿದ್ದಾರೆ. ಅವರಲ್ಲಿ ಡಿಸಿ ತಮ್ಮಣ್ಣ ಕೂಡ ಒಬ್ರು..ಕೃಷಿ ವಿವಿ ವಿಭಜನೆ ಹಿಂದೆ ರಾಜಕೀಯ ದುರುದ್ದೇಶವಿದೆ ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು ಅಂತೇಳಿ ಡಿಸಿ ತಮ್ಮಣ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲೆ ಅತಿ ದೊಡ್ಡ ಕೃಷಿ ವಿಶ್ವವಿದ್ಯಾಲಯವೆಂದರೆ ಅದು ಬೆಂಗಳೂರು ಕೃಷಿ ವಿವಿ. ಇದನ್ನ ವಿಭಜಿಸಿ ನಾಲ್ಕು ಕೃಷಿ ವಿವಿ ಮಾಡಲು ಹೊರಟಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಗುಡುಗಿದ್ದಾರೆ. ಈಗಿರುವ ವಿವಿಗೆ ಸರಕಾರದ ಅನುದಾನ ಕೊರತೆ ಇದೆ. ಅನುದಾನವಿಲ್ಲದ ಕಾರಣ ಸಂಶೋಧನೆಗಳು ನಡೆಯುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕೃಷಿಕರಿಗೆ ಮಾಹಿತಿ ಸಿಗುತ್ತಿಲ್ಲ, ಕೃಷಿ ಕ್ಷೇತ್ರ ದುರ್ಬಲವಾಗಿದೆ. ಕೃಷಿ ಮಾಹಿತಿ ಗೊತ್ತಿಲ್ಲದ ಕೃಷಿ ಮಂತ್ರಿಗಳಿಂದ ಏನು ನಿರೀಕ್ಷಿಸೋಕೆ ಸಾಧ್ಯ ಎಂದು ಡಿಸಿ ತಮ್ಮಣ್ಣ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕೃಷಿಕರ ಮೇಲೆ ಕಾಳಜಿ ಇದ್ದರೆ, ಹೀಗಿರುವ ಆರು ಕೃಷಿ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಿ ಅವುಗಳ ಅಭಿವೃದ್ದಿ ಮಾಡಿದ್ರೆ, ಸಾಕಾಗಿದೆ. ಇನ್ನು ಮೈಸೂರಿನ ಸಕ್ಕರೆ ಕಾರ್ಖನೆಗೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಿಟ್ಟಿದ್ದ 4000 ಎಕರೆ ಜಮೀನನ್ನು ಕಬ್ಬು ಮುಂತಾದ ಕೃಷಿ ಸಂಶೋಧನೆಗೆ ಉಳಿಸಿಕೊಳ್ಳಲಾಗದೆ 3000 ಎಕರೆ ಜಮೀನನ್ನು ಜಸ್ಟ್ ಎರಡು ಕೋಟಿಗೂ ಕಡಿಮೆ ಹಣಕ್ಕೆ ಹರಾಜಾಕಿದ್ದು ಗೊತ್ತೆ ಇದೆ.. ಇನ್ನು ಈಗಿರುವ ವಿಶ್ವವಿದ್ಯಾಲಯಗಳು ಬೆಳೆಯುವ ಕೃಷಿ ಭೂಮಿ ನುಂಗಿವೆ. ರೈತರ ಉದ್ದಾರದ ಹೆಸ್ರಲ್ಲಿ, ಉದ್ಯಮಿಗಳು ಮತ್ತು ಅವರ ಬೆನ್ನೆಲುಬಾಗಿ ನಿಂತ ರಾಜಕಾರಣಿಗಳು ಅಭಿವೃದ್ದಿಯಾಗಿದ್ದಾರೆ. ಇದ್ರಿಂದ ರೈತರಿಗೇನು ಪ್ರಯೋಜನ..
ಹೆಚ್ಚು ಹೆಚ್ಚು ಕೃಷಿ ವಿವಿ ಸ್ಥಾಪನೆಯಿಂದ ನಷ್ಟವೇ ಹೊರತು ಉಪಯೋಗ ಯಾರಿಗೂ ಇಲ್ಲ..ವಿವಿಗೆ ಅಧಿಕಾರಿಗಳು, ಅಧ್ಯಕ್ಷ ಉಪಾಧ್ಯಕ್ಷರು, ಕುಲಪತಿಗಳು, ಕುಲಸಚಿವರು ಅಂತ ನೇಮಕ ಮಾಡಿ ಅವರಿಗೆ ಗೂಟದ ಕಾರು ಕೊಟ್ಟು ಹಣ ವೆಚ್ಚ ಮಾಡಿದರೆ, ರೈತರಿಗೆ ಲಾಭವೇನು ಎಂದು ತಮ್ಮಣ್ಣ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ, ಭ್ರಷ್ಟಾಚಾರಕ್ಕೆ ನಾಂದಿ ಹಾಡುವ ಕೃಷಿ ವಿವಿಗಳ ಸ್ಥಾಪನೆ ಬದಲು, ಸೂರಿಲ್ಲದೆ ಸೊರಗುತ್ತಿರುವ ಕೆವಿಕೆಗಳಿಗೆ ಅನುದಾನ ನೀಡಿ ಪ್ರೋತ್ಸಾಹ ನೀಡಿದರೆ, ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರೋದಿಕ್ಕೆ ಸಾಧ್ಯವಾಗುತ್ತದೆ ಎಂದಿದ್ದಾರೆ. ಅಲ್ಲದೇ ರೈತ ಪರವಾದ ಒಂದಷ್ಟು ಕೆಲಸ ಮಾಡಲಿಕ್ಕೆ ಸರ್ಕಾರಕ್ಕೆ ಸಲಹೆಯನ್ನೂ ಕೊಟ್ಟಿದ್ದಾರೆ.
ಬರಡಾಗುತ್ತಿರುವ ಭೂಮಿ ರಕ್ಷಣೆ, ಫಲವತ್ತತೆ ಹೆಚ್ಚಿಸಲು ಕ್ರಮ, ಕೃಷಿ ಮಾರುಕಟ್ಟೆಗೆ ಆರ್ಥೀಕ ನೀತಿ, ಮಧ್ಯವರ್ತಿಗಳಿಗೆ ತಡೆ, ಹೊಲ ಗದ್ದೆಗೆ ಹೋಗುವ ಗ್ರಾಮೀಣ ರಸ್ತೆಗಳ ಅಭಿವೃದ್ದಿ, ನೈಸರ್ಗಿಕ ರಾಜಕಾಲುವೆ ಒತ್ತುವರಿ ತೆರವು ಸೇರಿದಂತೆ ಅನೇಕ ಸಲಹೆಗಳನ್ನ ಸರ್ಕಾರಕ್ಕೆ ಡಿಸಿ ತಮ್ಮಣ್ಣ ರೈತರ ಪರವಾಗಿ ನೀಡಿದ್ದಾರೆ. ಕೃಷಿ ಭೂಮಿ ಅಭಿವೃದ್ದಿಯಾಗದೆ ಹೋದರೆ, ಕೈಗಾರೀಕರಣ ಗಗನಕುಸುಮ.. ದೇಶದ ಬೆನ್ನೆಲುಬಾದ ರೈತರ ಅಭಿವೃದ್ದಿಯಾದಗಲೇ ದೇಶದ ಅಭಿವೃದ್ದಿ, ಎಂದು ತಮ್ಮಣ್ಣ ರೈತರ ಪರವಾಗಿ ಖಾರವಾಗಿಯೇ ಸಿದ್ದರಾಮಯ್ಯರ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಕೃಷಿ ಜ್ಞಾನವೇ ಇಲ್ಲದ ಅಧಿಕಾರಿಗಳು ವಿಧಾನಸೌಧದ ಐಷಾರಾಮಿ ಕೊಠಡಿಗಳಲ್ಲಿ ಕುಳಿತು ಆದೇಶಿಸುವ ಅಧಿಕಾರಿಗಳಿಗೆ ಮತ್ತು ಅನಾವಶ್ಯಕ ಯೋಜನೆ ರೂಪಿಸುವ ರಾಜಕಾರಣಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದು ಸಿದ್ದರಾಮಯ್ಯರನ್ನ ಕೋರಿದ್ದಾರೆ. ಒಟ್ನಲ್ಲಿ ಡಿಸಿ ತಮ್ಮಣ್ಣರ ಪತ್ರದಲ್ಲಿರುವ ಅಂಶಗಳು ನೂರಕ್ಕೆ ನೂರರಷ್ಟು ಸತ್ಯವೇ ಆಗಿದ್ದ, ಬೆಂಗಳೂರು ಕೃಷಿ ವಿವಿಯನ್ನ ವಿಭಜಿಸಿ ಮಂಡ್ಯದಲ್ಲಿ ಸ್ಥಾಪನೆ ಮಾಡೋಕೆ ಹೊರಟಿರೋದು ರಾಜಕೀಯ ದುರುದ್ದೇಶವಲ್ಲದೇ ಮತ್ತೇನೂ ಅಲ್ಲ…