ಹೇಳಿಕೊಳ್ಳೋಕೆ ನಮ್ಮದು ಲಕ್ಷುರಿ ಅಪಾರ್ಟ್ಮೆಂಟ್.. ಆದರೇನು ಲಾಭ? ತಿಂಗಳಿಂದ ಹನಿ ನೀರಿಗೂ ಒದ್ದಾಡುವ ಪರಿಸ್ಥಿತಿ ಏರ್ಪಟ್ಟಿದೆ. 24 ಗಂಟೆಯೂ ಬರಬೇಕಿದ್ದ ನೀರು ಹೊತ್ತು ಗೊತ್ತಿಲ್ಲದ ಅವೇಳೆಯಲ್ಲಿ ಬರುತ್ತಿವೆ. ಆ ಟೈಮಲ್ಲಿ ನಾವು ಇದ್ರಷ್ಟೇ ಮನೆಗೆ ನೀರು ಸಿಗುತ್ತೆ.. ಇಲ್ಲ ಅಂದ್ರೆ ಇಲ್ಲ. ಆ ನೀರು ಕೂಡ ಸರಿ ಇಲ್ಲ.ಆದರೂ ಅನಿವಾರ್ಯ.. ಅದನ್ನೇ ಹಿಡ್ಕೋಬೇಕು. ಪರಿಣಾಮ ನಿತ್ಯ ಸ್ನಾನ ಮಾಡದ ಪರಿಸ್ಥಿತಿ ಇದೆ. ಟಾಯ್ಲೆಟ್ ಕ್ಲೀನ್ ಮಾಡೋಕೆ ಆಗದ ಸ್ಥಿತಿ ಏರ್ಪಟ್ಟಿದೆ. ವಿಧಿ ಇಲ್ಲದೇ ನೆರೆಯ ಫೋರಂ ಸೌತ್ ಮಾಲ್ಗೆ ತೆರಳಿ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದೇವೆ.
ಇದು ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ರೆಡಿಟ್ನಲ್ಲಿ ತೋಡಿಕೊಂಡ ಅಳಲು.
ಅಂಥಾ ಪರಿಸ್ಥಿತಿಯಿಲ್ಲ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಹೇಳಿದರೂ, ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಟೆಕ್ಕಿಗಳಿಂದ ವಿಪರೀತ ಸ್ಪಂದನೆ ಸಿಗುತ್ತಿದೆ. ಸಿಲಿಕಾನ್ ಸಿಟಿಯ ನೂರಾರು ಅಪಾರ್ಟ್ಮೆಂಟ್ಗಳಲ್ಲಿ ನೆಲೆಸಿರುವ ಸಾವಿರಾರು ಟೆಕ್ಕಿಗಳು ತಮ್ಮದು ಕೂಡ ಸೇಮ್ ಟು ಸೇಮ್ ಕಥೆ-ವ್ಯಥೆ ಎನ್ನತೊಡಗಿದ್ದಾರೆ.
ಕೋಟಿ ಕೋಟಿ ಕೊಟ್ಟು ಖರೀದಿಸಿದ ಅಪಾರ್ಟ್ಮೆಂಟ್ಗಳನ್ನು ನೀರಿಲ್ಲ ಎಂಬ ಕಾರಣಕ್ಕೆ ಕೆಲವರು ತೊರೆದು ಬಾಡಿಗೆ ಮನೆ ಹುಡುಕಿಕೊಳ್ಳುತ್ತಿದ್ದಾರೆ.
ಹೌದು, ಬೆಂಗಳೂರು ನಗರ ಬಾಯಾರಿದೆ. ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದೆ.ಬೊಗಸೆ ನೀರಿಗಾಗಿ ಜನ ಪರದಾಡುವಂತಾಗಿದೆ. ಸಿಲಿಕಾನ್ ಸಿಟಿಯ ಬೊರ್ವೆಲ್ಗಳಲ್ಲಿ ಕನಿಷ್ಠ ಅರ್ಧದಷ್ಟಾದರೂ ನೀರಿಲ್ಲದೇ ಬಂದ್ ಆಗಿವೆ. ಕಾವೇರಿ ನೀರು ಕೂಡ ಸರಿಯಾಗಿ ಸರಬರಾಜು ಆಗುತ್ತಿಲ್ಲ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಾಮನ್ಯ. ಆದರೆ, ಇದೀಗ ಬೆಂಗಳೂರಿನಲ್ಲಿ ಕಂಡುಬರುತ್ತಿರುವ ಚಿತ್ರಣ ಹಿಂದೆಂದಿಗಿಂತ ಭಿನ್ನವಾಗಿದೆ. ಭೀಕರವಾಗಿದೆ. ಕೋಟಿ ಕೋಟಿ ಕೊಟ್ಟು ಲಕ್ಷುರಿ ಅಪಾರ್ಟ್ಮೆಂಟ್ ಖರೀದಿಸಿದವರೂ, ಕನಿಷ್ಠ ಸ್ನಾನಕ್ಕೂ ನೀರಿಲ್ಲದೇ ಲಬೋ ಲಬೋ ಅಂತಿದ್ದಾರೆ.
ಎದ್ದೇಳು ಸರ್ಕಾರ
ರಾಜ್ಯ ಸರ್ಕಾರ ಸೂಕ್ತ ಪರ್ಯಾಯ ಕ್ರಮಗಳನ್ನು ಸಮರ್ಥವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಸ್ಯೆಯ ತೀವ್ರತೆ ಕಡಿಮೆ ಆಗುತ್ತಿಲ್ಲ. ಕಳೆದ ಮೂರು ತಿಂಗಳ ಹಿಂದಿನಿಂದ್ಲೇ ಸಮಸ್ಯೆ ಕಂಡುಬಂದಿತ್ತು. ಸರ್ಕಾರ ಎಚ್ಚೆತ್ತುಕೊಳ್ಳದ ಕಾರಣ ಇದೀಗ ಜನ ಸಮಸ್ಯೆ ಉಲ್ಬಣಿಸಿದೆ.
ಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ಎಷ್ಟು ದೂರ ಬೇಕಿದ್ರೂ ಹೋಗ್ತೇನೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರರು ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದರೂ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ
ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಅದರ ಅನುಷ್ಠಾನ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಏಕಿಷ್ಟು ಸಮಸ್ಯೆ?
- 2023ರ ಮುಂಗಾರಿನಲ್ಲಿ ಮಳೆ ಕೊರತೆಯೇ ಸದ್ಯದ ನೀರಿನ ಸಮಸ್ಯೆಗೆ ಮೂಲ ಕಾರಣ
- ರಾಜ್ಯದಲ್ಲಿ ಎಲ್ಲಿ ನೋಡಿದರೂ ಅಂತರ್ಜಲ ಮಟ್ಟ ಕುಸಿದಿದೆ
- ಕಾವೇರಿ ಕೊಳ್ಳದ ಜಲಾಶಯಗಳೆಲ್ಲಾ ಹೆಚ್ಚು ಕಡಿಮೆ ಬರಿದಾಗಿವೆ
- ರಾಜ್ಯದ 16 ಜಲಾಶಯಗಳಲ್ಲಿ 2023ರಲ್ಲಿ ಇದೇ ಸಮಯದಲ್ಲಿ ಅರ್ಧದಷ್ಟು ನೀರಿತ್ತು. ಸದ್ಯ ನೀರಿನ ಸಂಗ್ರಹ ಪ್ರಮಾಣ ಶೇಕಡಾ 29ಕ್ಕೆ ಕುಸಿದಿದೆ.
- ದಿನೇ ದಿನೇ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಒದಗಿಸಲು ಸಾಧ್ಯ ಆಗುತ್ತಿಲ್ಲ
- ರಿಯಲ್ ಎಸ್ಟೇಟ್ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಕೆರೆಗಳು, ಜಲಮೂಲಗಳೆಲ್ಲಾ ಕಾಲನಿ, ಅಪಾರ್ಟ್ಮೆಂಟ್ಗಳಾಗಿ ಬದಲಾಗಿವೆ.
- ಸಿಕ್ಕಾಪಟ್ಟೆ ಬೋರ್ವೆಲ್ಗಳನ್ನು ಕೊರೆದಿರೋದು ಕೂಡ ನಗರದ ಜಲ ಸಮಸ್ಯೆಗೆ ಕಾರಣ
- ಅಂತರ್ಜಲ ಮಟ್ಟ ಕುಸಿತ ಕಾರಣ ಬೋರ್ವೆಲ್ಗಳು ಒಣಗುತ್ತಿವೆ.