ಕಲಬುರಗಿ ಮೂಲದ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯ ಜೊತೆ ಸಾರ್ವಜನಿಕವಾಗಿ ಅತ್ಯಂತ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಚ್ಚು ಹಚ್ಚಿದ್ದು, ಸಾರ್ವಜನಿಕರಿಂದ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಧ್ಯಾತ್ಮಿಕ ಗುರು ಎಂಬಂತೆ ಗುರುತಿಸಿಕೊಂಡಿರುವ ಮುತ್ಯಾ, ಆಶೀರ್ವಾದ ಪಡೆಯಲು ಬಂದ ಬಾಲಕಿಯ ಕುತ್ತಿಗೆಯ ಭಾಗಕ್ಕೆ ಅನುಚಿತವಾಗಿ ಚುಂಬಿಸುತ್ತಾ ಅಸಹ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದ್ದು, ಸುತ್ತಮುತ್ತಲಿದ್ದ ಜನರು ಇದನ್ನು ಪ್ರತಿಭಟಿಸದೆ ಮೌನವಾಗಿರುವುದನ್ನು ಕಂಡು ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.
ಅಧ್ಯಾತ್ಮದ ಮುಖವಾಡ ಧರಿಸಿ ಚಿಕ್ಕ ಪ್ರಾಯದ ಹೆಣ್ಣುಮಕ್ಕಳೊಂದಿಗೆ ಇಂತಹ ವಿಕೃತವಾಗಿ ನಡೆದುಕೊಳ್ಳುತ್ತಿರುವ ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನವೇ ನಡೆಯುತ್ತಿದೆ. ದೈವ ಭಕ್ತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಅನಾಚಾರವು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪರ-ವಿರೋಧದ ಚರ್ಚೆಗಳು ಮುಗಿಲು ಮುಟ್ಟಿವೆ.


