ಬೆಂಗಳೂರು : ಜಯನಗರದ 9ನೇ ಬ್ಲಾಕ್‌ನಲ್ಲಿ ‘ಮಲ್ಟಿವೇರ್ ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ನಕಲಿ ಕಂಪನಿ ತೆರೆದು ಷೇರು ಮಾರುಕಟ್ಟೆ ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿಯ ಇಮ್ರಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್‌ಗಳು ಮತ್ತು 16 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಗೂಗಲ್ ಮೂಲಕ ಷೇರು ಮಾರುಕಟ್ಟೆ ಗ್ರಾಹಕರ ಡೇಟಾವನ್ನು ಸಂಗ್ರಹಿಸಿ, ಸುಮಾರು 15 ಮಂದಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳ ಮೂಲಕ ಜನರಿಗೆ ಕರೆ ಮಾಡಿ ಸ್ಟಾಕ್ ಮಾರ್ಕೇಟ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಭಾರಿ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಗ್ರಾಹಕರಿಂದ ಆನ್‌ಲೈನ್ ಮೂಲಕ ಹಣವನ್ನು ಪಡೆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ ಈ ತಂಡವು, ವಂಚನೆಗಾಗಿ ಬೇರೆಯವರ ಹೆಸರಿನ ಸಿಮ್ ಕಾರ್ಡ್‌ಗಳು ಮತ್ತು ವಿವಿಧ ರಾಜ್ಯಗಳ ನಿವಾಸಿಗಳ ಬ್ಯಾಂಕ್ ಖಾತೆಗಳನ್ನು ಬಳಸುತ್ತಿತ್ತು.
ಮೊಬೈಲ್ ಲೊಕೇಶನ್ ಆಧರಿಸಿ ಜಯನಗರದ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಪೊಲೀಸರು ಐಟಿ ಕಾಯ್ದೆ ಮತ್ತು ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


