ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧಾರವಾಡದಲ್ಲಿ ಸಾವಿರಾರು ಯುವಕರು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಈ ಕುರಿತು ಸುದೀರ್ಘ ಪ್ರತಿಕ್ರಿಯೆ ನೀಡಿರುವ ಅವರು, ಉದ್ಯೋಗಾರ್ಥಿಗಳು ಅನುಭವಿಸುತ್ತಿರುವ ಆತಂಕ ಮತ್ತು ಅನಿಶ್ಚಿತತೆಯನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕುಟುಂಬದ ಕನಸು ಮತ್ತು ವರ್ಷಗಳ ಪರಿಶ್ರಮ ಇರುತ್ತದೆ, ಹೀಗಾಗಿ ಅಭ್ಯರ್ಥಿಗಳ ಪ್ರತಿಯೊಂದು ಕಾಳಜಿಯೂ ಸರ್ಕಾರದ ಗಮನದಲ್ಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಮತ್ತು ನೇಮಕಾತಿ ವಿಳಂಬಕ್ಕೆ ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ , ತಾವು ಅಧಿಕಾರ ಸ್ವೀಕರಿಸಿದಾಗ ರಾಜ್ಯದಲ್ಲಿ ಸುಮಾರು 2.64 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು ಹಿಂದಿನ ಸರ್ಕಾರ ಯಾವುದೇ ಸಮರ್ಪಕ ಯೋಜನೆ ರೂಪಿಸದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಅಲ್ಲದೆ, 2019 ರಿಂದ 2023ರ ನಡುವೆ ನಡೆದ ನೇಮಕಾತಿ ಹಗರಣಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಹಿನ್ನೆಡೆ ಉಂಟಾಗಲು ಕಾರಣವಾಯಿತು ಎಂದು ಅವರು ವಿವರಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಆಂತರಿಕ ಮೀಸಲಾತಿ ಕುರಿತ ಕಾನೂನು ಹೋರಾಟಗಳಿಂದಾಗಿ ಕೆಲವು ಪ್ರಕ್ರಿಯೆಗಳು ವಿಳಂಬವಾಗಿದ್ದವು, ಆದರೆ ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕಾನೂನು ಚೌಕಟ್ಟಿನಲ್ಲೇ ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳಿಗೆ ಮತ್ತೊಂದು ದೊಡ್ಡ ಸಿಹಿ ಸುದ್ದಿ ನೀಡಿರುವ ಸಿದ್ದರಾಮಯ್ಯ, ನೇಮಕಾತಿ ವಿಳಂಬದಿಂದ ವಯೋಮಿತಿ ಮೀರಿದ ಅಭ್ಯರ್ಥಿಗಳ ಸಂಕಷ್ಟವನ್ನು ಮನಗಂಡು ಮುಂದಿನ ನೇಮಕಾತಿಗಳಲ್ಲಿ ವಯೋಮಿತಿ ಮಿತಿಯನ್ನು 5 ವರ್ಷಕ್ಕಿಂತ ಹೆಚ್ಚು ಸಡಿಲಿಸಲಾಗಿದೆ ಎಂದು ಘೋಷಿಸಿದ್ದಾರೆ. ಉಳಿದಿರುವ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ.


