ಬೆಂಗಳೂರು: ರಾಜ್ಯದ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್ಟಿ ಶಾಕ್ ಕೊಟ್ಟಿರುವುದು ಅತ್ಯಂತ ಖಂಡನೀಯ. ಜಿಎಸ್ ಟಿ ಕಾನೂನು ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಕೆಲವು ರಿಯಾಯ್ತಿ ಇದೆ. ಆ ರಿಯಾಯಿತಿ ನಂತರ ತೆರಿಗೆ ಕಟ್ಟಬೇಕೆಂಬ ಪದ್ದತಿ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನ ಹರಿಸಿ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ದುಡುಕಿ ಹಲವಾರು ವರ್ಷದ ತೆರಿಗೆ ಅದರ ಮೇಲೆ ಬಡ್ಡಿ ಮತ್ತು ಇತರ ಚಾರ್ಜ್ ಹಾಕಿ ಸಣ್ಣ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದೊಡ್ಡ ಹೊರೆ ಹೊರೆಸಿ ಅವರು ವ್ಯಾಪಾರ ಮುಚ್ಚುವ ಪರಿಸ್ಥಿತಿಗೆ ತಂದಿರುವುದು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂಬಂಧ ಪಟ್ಟ ಸಣ್ಣ ವ್ಯಾಪಾರಿಗಳ ಪ್ರತಿನಿಧಿಗಳನ್ನು ಕರೆದು ಚರ್ಚೆ ಮಾಡಿ ಅವರಿಗೆ ಎಲ್ಲ ರೀತಿಯ ರಿಯಾಯಿತಿಗಳನ್ನು ಕೊಟ್ಟು ಕರ ಸಮಾಧಾನ ಯೋಜನೆ ಅಡಿಯಲ್ಲಿ ಯಾವ ರೀತಿ ತೆರಿಗೆದಾರರಿಗೆ ಸಹಾಯ ಮಾಡುತ್ತವೇಯೋ ಅದೇ ರೀತಿ ಅವರಿಗೂ ಸಹಾಯ ಮಾಡಬೇಕು. ಬೇರೆ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಏನೆಲ್ಲ ಕ್ರಮ ತೆಗೆದುಕೊಂಡಿದ್ದಾರೆ. ಸಣ್ಣ ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಆ ಕ್ರಮ ಇಲ್ಲಿ ಕೂಡ ಅನ್ವಯಿಸಬೇಕೆಂದು ಆಗ್ರಹ ಮಾಡುತ್ತೇನೆ.
ರಾಜ್ಯದಲ್ಲಿ ಹಣಕಾಸಿನ ತೊಂದರೆಯಾಗಿ ಬೊಕ್ಕಸ ಖಾಲಿಯಾಗಿರುವುದು ಮತ್ತು ಈ ವರ್ಷದ ಮೊದಲನೇಯ ತ್ರೈಮಾಸಿಕ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಗಾಬರಿಯಿಂದ ತೀವ್ರವಾದ ಕ್ರಮಕ್ಕೆ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.


