ರಾಜ್ಯಸುದ್ದಿ

3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಸಂಪ್‌ನಲ್ಲಿ ಶವವಾಗಿ ಪತ್ತೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ 14 ವರ್ಷದ ಬಾಲಕ, ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ಇರುವ ಜಲಮಂಡಳಿಯ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಚಾಮರಾಜನಗರ ಮೂಲದ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ದುರ್ದೈವಿ. ರಜನಿಕಾಂತ್ ಕುಟುಂಬ ತಾತಗುಣಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೊರಹೋದ ಪ್ರೀತಮ್ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಬೆಂಗಳೂರು ಜಲಮಂಡಳಿಯು ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಾಗಿ ತಾತಗುಣಿ ಬಳಿ ದೊಡ್ಡ ಸಂಪ್ (ಚೇಂಬರ್) ನಿರ್ಮಿಸಿತ್ತು. ಆದರೆ, ಈ ಸಂಪ್ ಅನ್ನು ಸರಿಯಾಗಿ ಮುಚ್ಚದೆ ಅಥವಾ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ತೆರೆದಿಡಲಾಗಿತ್ತು ಎನ್ನಲಾಗಿದೆ. ಬಾಲಕ ಆಟವಾಡುತ್ತಾ ಅಥವಾ ಓಡಾಡುವಾಗ ಆಕಸ್ಮಿಕವಾಗಿ ತೆರೆದಿದ್ದ ಈ ಸಂಪ್‌ಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸರಿಯಾದ ಮುನ್ನೆಚ್ಚರಿಕೆ ವಹಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

Comments (0)

Your email address will not be published. Required fields are marked *

Back to top button